ಶ್ರೀರಂಗನಾಯಕ
ಶ್ರೀರಂಗನಾಯಕ ರಾಜೀವಲೋಚನ
ರಮಣನೆ ಬೆಳಗಾಯಿತೇಳೆನ್ನುತ ||ಪ||
ಅಂಗನೆ ಲಕುಮಿ ತಾ ಪತಿಯೆನೆಬ್ಬಿಸಿದಳು
ಶೃಂಗಾರದ ನಿದ್ರೆ ಸಾಕೆನ್ನುತ ||ಅ ಪ||
ಪಕ್ಷಿರಾಜನು ಬಂದು ಬಾಗಿಲೊಳಗೆ ನಿಂದು
ಅಕ್ಷಿ ತೆರೆದು ಬೇಗ ಈಕ್ಷಿಸೆಂದು |
ಪಕ್ಷಿಜಾತಿಗಳೆಲ್ಲ ಚಿಲಿಪಿಲಿಗುಟ್ಟುತ್ತ
ಸುಕ್ಷ್ಮದಲಿ ನಿನ್ನನು ಸ್ಮರಿಸುವವೊ ಕೃಷ್ಣ ||ಶ್ರೀರಂಗನಾಯಕ||
ಸನಕ ಸನಂದನ ಸನತ್ಸುಜಾತರು ಬಂದು
ವಿನಯದಿಂ ಕೈಮುಗಿದು ಓಲೈಪರು |
ಮುನಿ ಶುಕ ಶೌನಕ ವ್ಯಾಸ ವಾಲ್ಮೀಕರು
ನೆನೆದು ನಲಿದು ಕೊಂಡಾಡುವರೊ ಹರಿಯೆ || ಶ್ರೀರಂಗನಾಯಕ ||
ಸುರರು ಕಿನ್ನರರು ಕಿಂಪುರುಷರು ಉರಗರು
ಪರಿಪರಿಯಲಿ ನಿನ್ನ ಸ್ಮರಿಸುವರು |
ಅರುಣನು ಬಂದು ದಯಾಚಲದಲಿ ನಿಂದು
ಕಿರಣ ತೋರುವ ಭಾಸ್ಕರನು ಶ್ರೀಹರಿಯೆ ||ಶ್ರೀರಂಗನಾಯಕ ||
ಪದುಮನಾಭನೆ ನಿನ್ನ ನಾಮಾಮೃತವನ್ನು
ಪದುಮಾಕ್ಷಿಯರು ತಮ್ಮ ಮನೆಯೊಳಗೆ |
ಉದಯದೊಳೆದ್ದು ಸವಿದಾಡುತ್ತ ಪಾಡುತ್ತ
ದಧಿಯ ಕಡೆವರೇಳು ಮಧುಸೂದನ ಕೃಷ್ಣ || ಶ್ರೀರಂಗನಾಯಕ ||
ಮುರಮಥನನೆ ನಿನ್ನ ಚರಣದ ಸೇವೆಯ
ಕರುಣಿಸಬೇಕೆಂದು ತರುಣಿಯರು |
ಪರಿಪರಿಯಿಂದಲಿ ಸ್ಮರಿಸಿ ಹಾರೈಪರು
ಪುರಂದರವಿಠಲ ನೀನೇಳೊ ಶ್ರೀಹರಿಯೆ || ಶ್ರೀರಂಗನಾಯಕ ||
Comments
Post a Comment