ತಾಳುವಿಕೆಗಿಂತನ್ಯ
ತಾಳುವಿಕೆಗಿಂತನ್ಯ ತಪವು ಇಲ್ಲ
ಕೇಳಬಲ್ಲವರಿಂಗೆ ಪೇಳುವೆನು ಸೊಲ್ಲ ||ಪ||
ದುಷ್ಟ ಮನುಜರು ಪೇಳ್ವ ನಿಷ್ಟುರದ ನುಡಿ ತಾಳು
ಕಷ್ಟ ಬಂದರೆ ತಾಳು ಕಂಗೆಡದೆ ತಾಳು |
ನೆಟ್ಟಸಸಿ ಫಲಬರುವ ತನಕ ಶಾಂತಿಯ ತಾಳು
ಕಟ್ಟು ಬುತ್ತಿಯ ಮುಂದೆ ಉಣಲುಂಟು ತಾಳು ||ತಾಳು||
ಹಳಿದು ಹಂಗಿಸುವಂಥ ಹಗೆಯ ಮಾತನು ತಾಳು
ಸುಳಿನುಡಿ ಕುಹಕಾದಿ ಮಂತ್ರವನು ತಾಳು |
ಅಳುಕದಲೆ ಬಿರುಸು ಬಿಂಕದ ನುಡಿಯ ನೀ ತಾಳು
ಹಲಧರಾನುಜನನು ಹೃದಯದಲಿ ತಾಳು ||ತಾಳು||
ನಕ್ಕು ನುಡಿವರ ಮುಂದೆ ಮುಕ್ಕರಿಸದೆ ತಾಳು
ಅಕ್ಕಸವ ಮಾಡುವರ ಅಕ್ಕರದಿ ತಾಳು |
ಉಕ್ಕೋ ಹಾಲಿಗೆ ನೀರು ಇಕ್ಕುವಂದದಿ ತಾಳು
ಪಕ್ಷೀಶ ಹಯವದನ ಶರಣೆಂದು ಬಾಳು ||ತಾಳು||
Comments
Post a Comment