ಕಂಡೆ ಕರುಣಾನಿಧಿಯ

 

ಕಂಡೆ ಕರುಣಾನಿಧಿಯ 

ಗಂಗೆಯ ಮಂಡೆಯೊಳಿಟ್ಟ ದೊರೆಯ  ||ಪ||


ರುಂಡಮಾಲೆ ಸಿರಿಯ 

ನೊಸಲೊಳು ಕೆಂಡಗಣ್ಣಿನ ಬಗೆಯ ||ಅ.ಪ||


ಗಜ ಚರ್ಮಾಂಬರನ ಗೌರೀವರ ತ್ರಿಜಗದೀಶ್ವರನ |

ತ್ರಿಜಗನ್ಮೋಹನನ  ತ್ರಿಪುರಾಂತಕ ತ್ರಿಲೋಚನ ಶಿವನ, ಹರನ   ||ಕಂಡೆ||


ಭಸಿತ ಭೂಷಿತ ಹರನ ಭಕ್ತರ ವಶದೊಳಗಿರುತಿಹನ |

ಪಶುಪತಿಯೆನಿಸುವನ ವಸುಧೆಲಿ ಶಶಿಶೇಖರ ಶಿವನ, ಹರನ ||ಕಂಡೆ||


ಕಪ್ಪುಗೊರಳ ಹರನ ಕಂದರ್ಪ ಪಿತನ ಸಖನ |

ಮುಪ್ಪುರ ಗೆಲಿದವನ ಮುನಿನುತ ಸರ್ಪಭೂಷಣ ಶಿವನ, ಹರನ  ||ಕಂಡೆ|


ಕಾಮಿತ ಫಲವೀವನ ಭಕ್ತರ ಪ್ರೇಮದಿ ಸಲಹುವನ |

ರಾಮನಾಮಸ್ಮರನ ರತಿಪತಿ ಕಾಮನ ಸಂಹರನ, ಶಿವನ  ||ಕಂಡೆ|


ಧರೆಗೆ ದಕ್ಷಿಣಕಾಶಿ ಎನಿಸುವ ಪುರ ಪಂಪಾವಾಸಿ |

ತಾರಕ ಉಪದೇಶಿ ಪುರಂದರವಿಠಲ ಭಕ್ತರ ಪೋಷಿ ||ಕಂಡೆ|

Comments

Popular Posts