ನಿನ್ನನಾಶ್ರಯಿಸುವೆನು

 

ನಿನ್ನನಾಶ್ರಯಿಸುವೆನು ನಿಗಮಗೋಚರ ನಿತ್ಯ

ಬೆನ್ನಬಿಡದೇ ಕಾಯೋ ಮನದೀಷ್ಟವೀಯೋ ||ಪ||


ಕುಂದಣದೊಳಾಶ್ರಯವೊ ನವರತ್ನಗಳಿಗೆಲ್ಲಾ |

ಚಂದಿರನ ಆಶ್ರಯವೊ ಚಕೋರಗೆ |

ಕಂದರ್ಪನಾಶ್ರಯವೊ ವಸಂತಕಾಲಕ್ಕೆ |

ಗೋವಿಂದನಾಶ್ರಯವೊ ಮರಣಕಾಲದೊಳು ||ನಿನ್ನನಾಶ್ರಯಿಸುವೆನು||


ಹಣ್ಣುಳ್ಳ ಮರಗಳಿಗೆ ಪಕ್ಷಿಗಳಾಶ್ರಯವು |

ಪುಣ್ಯನದಿಗಳಿಗೆ ಋಷಿಗಳಾಶ್ರಯವು |

ಕಣ್ಣಿಲ್ಲದಾತನಿಗೆ ಕೈಗೋಲಿನಾಶ್ರಯವು |

ತನ್ನಿಷ್ಟ ಪಡೆದವಗೆ ನಿನ್ನ ಆಶ್ರಯವು ||ನಿನ್ನನಾಶ್ರಯಿಸುವೆನು||


ಪತಿವ್ರತಾವನಿತೆರಿಗೆ ಪತಿಯೊಂದೆ ಆಶ್ರಯವು |

ಯತಿಗಳಿಗೆ ಶೃತಿ ಪ್ರಣವನಾಶ್ರಯವು |

ಮತಿಯುಕ್ತನಾದವಗೆ ಹರಿ ಸ್ತುತಿಯೆ ಆಶ್ರಯವು |

ಹಿತವಾದ ಪುರಂದರ ವಿಠಲ ನಿನ್ನಾಶ್ರಯವು ||ನಿನ್ನನಾಶ್ರಯಿಸುವೆನು||

Comments

Popular Posts