ಯಾಕೆ ದಯವನು ಮಾಡೆ

 

ಯಾಕೆ ದಯವನು ಮಾಡೆ ಹೇ ಸಾಂಬ ಶಿವನೇ |
ಲೋಕ ರಕ್ಷಕನೆಂಬ ಬಿರುದ ಪೊಗಳಿಸಿಕೊಂಡು ||ಪ||

ವಾಸವೇ ಕೈಲಾಸ ವಸನವೇ ಗಜಚರ್ಮ |
ವಾಸುದೇವನೆ ಮಿತ್ರ ವಧುವೆ ಗಿರಿಜೆ |
ವಾಸುಕಿಯೆ ಆಭರಣ ವಾಸುಧೆಯೇ ರಥವೆಂಬ|
ಈಸು ಗರ್ವದೊಲೆನ್ನ ಮರೆತೆಯೋ ಮಹಾದೇವ ||ಯಾಕೆ||

ಸಾರಥಿಯೆ ಬ್ರಹ್ಮ ಮಹಾ ಮೇರುವೇ ಧನು ಇದಕೆ |
ನಾರಾಯಣ ಅಸ್ತ್ರ ನಾಗೇಂದ್ರ ಸೂತ್ರ |
ಈ ರೀತಿಯಲಿ ಮೂರು ಪುರವ ಜಯಿಸಿದೆನೆಂಬ |
ಅಹಂಕಾರದಿಂದೆನ್ನ ಮರೆತೆಯೋ ಶಿವನೇ ||ಯಾಕೆ||

ಬಡವನೊಡನ್ಯಾಕಿನಿತು ಕಡುವ ತೋರಿದೆ ಶಿವನೇ |
ಬಿಡದೆನ್ನ ಕಾಯೊ ಮನದಿಷ್ಟಾರ್ಥ ವೀಯೋ |
ಮೃಡನು ನೀನಲ್ಲದಿನ್ಯಾರುಂಟು ಈ ಜಗಕೆ |
ರಜತಗಿರಿ ವಾಸ ಶ್ರೀಚಂದ್ರಮೌಳೀಶ ||ಯಾಕೆ||

Comments

Popular Posts