ಇಲ್ಲೇ ವೈಕುಂಠ ಕಾಣಿರೊ

 

ಇಲ್ಲೇ ವೈಕುಂಠ ಕಾಣಿರೊ  ||ಪ ||

ಇಲ್ಲೇ ವೈಕುಂಠ ಕಾಣಿರೊ  |
ವಲ್ಲಭನಂಘ್ರಿಯ ನೆರೆನಂಬಿದವರಿಗೆ ||ಅ ಪ ||

ನುಡಿಯೆರಡಾಗದೆ ಕಡುಕೋಪ ಮಾಡದೆ 
ಬಡತನ ಬಂದರು ಲೆಕ್ಕಿಸದೆ |
ಬೆಡಗು ಹೆಣ್ಣುಗಳ ಕಡೆಗಣ್ಣೊಳು ನೋಡದೆ 
ಧೃಡಚಿತ್ತದಲಿ  ಹರಿಯ ನಂಬಿದವರಿಗೆ ||ಇಲ್ಲೇ||

ಪಕ್ಷಪಾತವಿಲ್ಲದೆ ಅನ್ನದಾನಂಗಳನು 
ಪೇಕ್ಷೆಯ ಮಾಡದೆ ಗುರುಹಿರಿಯರನು |
ಮೋಕ್ಷವ ಬಯಸುತ ಅನ್ಯಾಯವಳಿಯುತ 
ಲಕ್ಷ್ಮೀನಾರಾಯಣನ ಬಿಡದೆ ಧ್ಯಾನಿಪರಿಗೆ ||ಇಲ್ಲೇ||

ಪರಹಿತವನು ಮಾಡಿ ಕೆರೆಬಾವಿಗಳ 
ಅರವಟಿಗೆಯ ಸಾಲಮರವ ಹಾಕಿ |
ಸಿರಿಪುರದರಸು ಶ್ರೀ ಪುರಂದರವಿಠಲನ 
ಸ್ಥಿರಚಿತ್ತದಲಿ ಬಿಡದೆ ಸ್ಮರಿಸುತ್ತಲಿರುವರಿಗೆ ||ಇಲ್ಲೇ|| 

Comments

Popular Posts