ಏಕೆನ್ನ ಈ ರಾಜ್ಯ

 

ಏಕೆನ್ನ ಈ ರಾಜ್ಯಕ್ಕೆಳೆತಂದೆ ಹರಿಯೇ | 

ಸಾಕಲಾರದೆ ಎನ್ನ ಏಕೆ ಹುಟ್ಟಿಸಿದೆ ||ಪ|| 


ಎನ್ನ ಕುಲದವರಿಲ್ಲ ಎನಗೊಬ್ಬ ಹಿತರಿಲ್ಲ 

ಮನ್ನಿಸುವ ದೊರೆಯಿಲ್ಲ ಮನಕೆ ಜಯವಿಲ್ಲ |

ಹೊನ್ನು ಚಿನ್ನಗಳಿಲ್ಲ ಒಲಿಸಿಕೊಂಬುವರಿಲ್ಲ 

ಇನ್ನಿಲ್ಲಿ ತರವಲ್ಲ ಇಂದಿರೇಶನು ಬಲ್ಲ ||ಏಕೆನ್ನ||


ದೇಶ ಪರಿಚಯವಿಲ್ಲ ದೇಹದಲ್ಲಿ ಬಲವಿಲ್ಲ 

ವಾಸಿ ಪಂಥಗಳೆಂಬೊ ಒಲುಮೆ ಎನಗಿಲ್ಲ |

ಬೇಸರ ಕಳೆವರಿಲ್ಲ ಬೇರೆ ಹಿತಜನರಿಲ್ಲ  

ವಾಸುದೇವನೆ ಬಲ್ಲ ಈ ರಾಜ್ಯವೆಲ್ಲ ||ಏಕೆನ್ನ||   


ಕರೆದು ಕೊಡುವವರಿಲ್ಲ ಕರುಣೆ ತೋರುವರಿಲ್ಲ  

ಕಮಲಾಕ್ಷನಲ್ಲದೆ ಎನಗೊಬ್ಬರಿಲ್ಲ |

ಕನಸಿನಲಿ ಕಳುವಿನ ಮನಸಿನಲಿ ದೃಢವಿಲ್ಲ 

ವನಜಾಕ್ಷ ಪುರಂದರ ವಿಠಲ ತಾ ಬಲ್ಲ ||ಏಕೆನ್ನ||

Comments

Popular Posts