ಜಯತು ಕೋದಂಡರಾಮ
ಜಯತು ಕೋದಂಡರಾಮ ಜಯತು ದಶರಥರಾಮ
ಜಯತು ಸೀತಾರಾಮ ಜಯತು ರಘುರಾಮ |
ಜಯತು ಜಯತು ||ಪ||
ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ
ಪ್ರೀತಿಯಿಂದಲಿ ತಂದು ಸಕಲ ಭೂತಳವ |
ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ |
ಭೀತಿಯನು ಬಿಡಿಸಿ ನೆರೆಕಾಯ್ದ ರಘುರಾಮ ||ಜಯತು||
ಬಲಿಯೊಳ್ ದಾನವ ಬೇಡಿ ನೆಲನ ಈರಡಿ ಮಾಡಿ
ಛಲದಿಂದ ಕ್ಷತ್ರಿಯರ ಕುಲವ ಹೋಗಾಡಿ |
ಲಲನೆಗೋಸುಗ ಬಂದ ನೆವದಿಂದ ರಾವಣನ |
ತಲೆಗಳನು ಚೆಂಡಾದಿ ಮೆರೆದ ರಘುರಾಮ ||ಜಯತು||
ವಸುದೇವಸುತನೆನಿಸಿ ವನಿತೆಯರ ವ್ರತಗೆಡಿಸಿ
ಎಸೆವ ತುರಗವನೇರಿ ಮಲ್ಲರನು ಸವರಿ |
ವಸುಧೆಯೊಳು ಪುರಂದರವಿಠಲ ನೀ ಪಾಲಿಸೈ |
ಬಿಸಜಾಕ್ಷಯೋಧ್ಯ ಪುರವಾಸ ರಘುರಾಮ ||ಜಯತು||
Comments
Post a Comment