ಏನೆಂದು ಕೊಂಡಾಡಿ
ಏನೆಂದು ಕೊಂಡಾಡಿ ಸ್ತುತಿಸಲೋ ದೇವ
ನಾನೇನು ಬಲ್ಲೆನು ನಿನ್ನ ಮಹಿಮೆಗಳ ||ಪ||
ಹರಿಮುಕುಂದನು ನೀನು ನರಜನ್ಮ ಹುಳ ನಾನು
ಪರಮಾತ್ಮನು ನೀನು ಪಾಮರನು ನಾನು |
ಗರುಡ ಗಮನನು ನೀನು ಮರುಳು ಪಾಪಿಯು ನಾನು
ಪರಂಜ್ಯೋತಿಯು ನೀನು ದುರುಳ ತಿರುಕನು ನಾನು ||ಏನೆಂದು||
ವಾರಿಧಿಶಯನಾದ ಕಾರುಣ್ಯನಿಧಿ ನೀನು
ಘೋರದಿಂದಿಹ ಕಾಮಿಕ್ರೋಧಿ ನಾನು |
ಈರೇಳು ಭುವನದೊಳು ಇರುವ ಮೂರುತಿ ನೀನು
ದೂರಿ ನಿನ್ನನು ಬೈವ ದುಷ್ಟನು ನಾನು ||ಏನೆಂದು||
ಅಣುರೇಣು ತೃಣಗಳಲಿ ಪರಿಪೂರ್ಣನು ನೀನು
ಕ್ಷಣಕ್ಷಣಕೆ ಅವಗುಣದ ಕುಕರ್ಮಿ ನಾನು |
ವಾಣಿಯರಸನ ಪೆತ್ತ ವೈಕುಂಠಪತಿ ನೀನು
ಕ್ಷಣಭಂಗುರ ತನುವಿನ ಗೊಂಬೆ ನಾನು ||ಏನೆಂದು||
ತಿರುಪತಿಯ ವಾಸ ಶ್ರೀವೆಂಕಟೇಶನೆ ನೀನು
ಸ್ಮರಿಸಿ ನಿನ್ನಯ ಪಾದ ಬದುಕುವನು ನಾನು |
ಬಿರುದುಳ್ಳವನು ನೀನು ಮೊರೆಹೊಕ್ಕವನು ನಾನು
ಸಿರಿ ಕಾಗಿನೆಲೆಯಾದಿ ಕೇಶವನು ನೀನು ||ಏನೆಂದು||
Comments
Post a Comment