ಹೂವ ತರುವರ ಮನೆಗೆ
ಹೂವ ತರುವರ ಮನೆಗೆ ಹುಲ್ಲ ತರುವ
ಅವ್ವೆ ಲಕುಮೀರಮಣ ಇವಗಿಲ್ಲ ಗರುವ ||ಪ||
ಒಂದು ದಳ ಶ್ರೀ ತುಳಸಿ ಬಿಂದು ಗಂಗೋದಕವ
ಇಂದಿರಾರಮಣಗೆ ಅರ್ಪಿತವೆನ್ನುತ |
ಒಂದೆ ಮನದಲಿ ಸಿಂಧುಶಯನ ಮುಕುಂದಯೆನೆ
ಎಂದೆಂದು ವಾಸಿಪನಾ ಮಂದಿರದ ಓಳಗೆ ||ಹೂವ||
ಪರಿಪರಿಯ ಪುಷ್ಪಗಳ ಪರಮಾತ್ಮಗರ್ಪಿಸಿ
ಪರಿಪೂರ್ಣನೆಂದು ಪೂಜೆಯನು ಮಾಡೆ |
ಸರಸಿಜಾಕ್ಷನು ತನ್ನ ಸಕಲ ಸ್ವಾತಂತ್ರ್ಯದಲಿ
ಸರಿಭಾಗ ಕೊಡುವ ತನ್ನ ಅರಮನೆಯ ಒಳಗೆ ||ಹೂವ||
ಪಾಂಡವರ ಮನೆಯೊಳಗೆ ಕುದುರೆಗಳ ತಾ ತೊಳೆದು
ಪುಂಡರೀಕಾಕ್ಷ ತಾ ಹುಲ್ಲ ತಂದ |
ಅಂಡಜಾಧಿಪ ನಮ್ಮ ಪುರಂದರವಿಠಲನು
ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು ||ಹೂವ||
Comments
Post a Comment