ನೆರೆನಂಬಿದೆ
ನೆರೆನಂಬಿದೆ ಮದ್ ಹೃದಯ ಮಂಟಪದೊಳು
ಪರಿಶೋಭಿಸುತಿರು ಪಾಂಡುರಂಗ ||ಪ||
ಶರಣು ಜನರ ಸಂಸಾರ ಮಹಾ ಭಯ
ಹರಣ ಕರುಣ ಸಿರಿ ಪಾಂಡುರಂಗ ||ಅ.ಪ||
ನೆರೆದಿಹ ಬಹುಜನರೋಳಿದ್ದರು ಮನ
ಸ್ಥಿರ ವಿಡು ನಿನ್ನಲಿ ಪಾಂಡುರಂಗ |
ಪರಿ ಪರಿ ಕೆಲಸವು ನಿನ್ನ ಮಹಾಪೂಜೆ
ನಿರುತ ಎನಗೆ ಕೊಡು ಪಾಂಡುರಂಗ ||ನೆರೆನಂಬಿದೆ||
ಪರದೇವನೆ ನಿನ್ನ ಲೀಲಾ ಸ್ಮೃತಿಯನು
ನಿರುತ ಎನಗೆ ಕೊಡು ಪಾಂಡುರಂಗ |
ಪರರಾಪೇಕ್ಷೆಯ ಬಿಡಿಸಿ ನಿರಂತರ
ಪರಗತಿ ಪಥ ತೋರೋ ಪಾಂಡುರಂಗ ||ನೆರೆನಂಬಿದೆ||
ಸುಖವಾಗಲಿ ಬಹು ದುಃಖವಾಗಲಿ
ಸಖನೀನಾಗಿರು ಪಾಂಡುರಂಗ |
ನಿಖಿಲಾಂತರ್ಗತ ವ್ಯಾಸ ವಿಠಲ ತವ
ಮುಖ ಪಂಕಜ ತೋರೋ ಪಾಂಡುರಂಗ ||ನೆರೆನಂಬಿದೆ||
Comments
Post a Comment