ನಾನೇಕೆ ಬಡವನೊ
ನಾನೇಕೆ ಬಡವನೊ ನಾನೇಕೆ ಪರದೇಶಿ
ಶ್ರೀನಿಧೇ ಹರಿ ಎನಗೆ ನೀನಿರುವ ತನಕ ||ಪ||
ಪುಟ್ಟಿಸಿದ ತಾಯ್ತಂದೆ ಇಷ್ಟಮಿತ್ರನು ನೀನೆ
ಇಷ್ಟ ಬಂಧು ಬಳಗ ಸರ್ವ ನೀನೆ |
ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ |
ಶ್ರೇಷ್ಠ ಮೂರುತಿ ಕೃಷ್ಣ ನೀನಿರುವತನಕ ||ನಾನೇಕೆ||
ಒಡಹುಟ್ಟಿದವ ನೀನೆ ಒಡಲಿಗೆ ಹಾಕುವ ನೀನೆ
ಉಡಲು ಹೊದೆಯಲು ವಸ್ತ್ರ ಕೊಡುವವ ನೀನೆ |
ಮಡದಿ ಮಕ್ಕಳನೆಲ್ಲ ಕಡೆಹಾಯಿಸುವವ ನೀನೆ |
ಬಿಡದೆ ಸಲಹುವ ಒಡೆಯ ನೀನಿರುವತನಕ ||ನಾನೇಕೆ|
ವಿದ್ಯೆ ಹೇಳುವ ನೀನೆ ಬುದ್ಧಿ ಕಲಿಸುವ ನೀನೆ
ಉದ್ಧಾರಕರ್ತ ಮಮಸ್ವಾಮಿ ನೀನೆ |
ಮುದ್ದು ಶ್ರೀ ಪುರಂದರ ವಿಠಲ ನಿನ್ನಡಿಮೇಲೆ |
ಬಿದ್ದು ಕೊಂಡಿರುವತನಕ ಏತರ ಭಯವೊ ||ನಾನೇಕೆ||
Comments
Post a Comment