ಆದದ್ದೆಲ್ಲ ಒಳಿತೇ ಆಯಿತು
ಆದದ್ದೆಲ್ಲ ಒಳಿತೇ ಆಯಿತು
ನಮ್ಮ ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು ||ಪ||
ದಂಡಿಗೆ ಬೆತ್ತ ಹಿಡಿಯುವುದಕ್ಕೆ
ಮಂಡೆ ಬಾಗಿ ನಾಚುತಲಿದ್ದೆ |
ಹೆಂಡತಿ ಸಂತತಿ ಸಾವಿರ ವಾಗಲಿ
ದಂಡಿಗೆ ಬೆತ್ತ ಹಿಡಿಸಿದಳಯ್ಯ ||ಆದದ್ದೆಲ್ಲ||
ಗೋಪಾಲ ಬುಟ್ಟಿ ಹಿಡಿಯುವುದಕ್ಕೆ
ಭೂಪತಿ ಎಂದು ಗರ್ವಿಸುತ್ತಿದ್ದೆ |
ಆ ಪತ್ನೀಕುಲ ಸಾವಿರವಾಗಲಿ
ಗೋಪಾಲ ಬುಟ್ಟಿ ಹಿಡಿಸಿದಳಯ್ಯ ||ಆದದ್ದೆಲ್ಲ||
ತುಳಸೀ ಮಾಲೆ ಹಾಕುವುದಕ್ಕೆ
ಅರಸನೆಂದು ತಿರುಗುತಲಿದ್ದೆ |
ಸರಸಿಜಾಕ್ಷ ಪುರಂದರ ವಿಠಲನು
ತುಳಸಿಮಾಲೆ ಹಾಕಿಸಿದನು ||ಆದದ್ದೆಲ್ಲ||
Comments
Post a Comment