ಬೆಳಗು ಜಾವದಿ ಬಾರೋ
ಬೆಳಗು ಜಾವದಿ ಬಾರೋ ಹರಿಯೇ
ನಿನ್ನಚರಣ ತೊಳೆದು ಜಲವ ಪಾನ ಮಾಡುವೆ ನಾ ||ಪ||
ನೀರ ಒಳಗೆ ನಿಂತುಕೊಂಬೆ,
ಬೆನ್ನ ಭಾರ ಪೊತ್ತರೆ ನಗುವಳು ನಿನ್ನ ರಂಭೆ |
ಮೋರೆ ತಗ್ಗಿಸದರೇನೆಂಬೆ
ಜಗದಿ ನಾರಸಿಂಹನಾಗಿ ಪೂಜೆಯ ಕೊಂಬೆ ||ಬೆಳಗು||
ಬಲಿಯ ದಾನವ ಬೇಡಿದ್ಯಲ್ಲೋ,
ಕ್ಷತ್ರಿ ಕುಲವ ಸವರೆ ಕೊಡಲಿಯ ಪಿಡಿದ್ಯಲ್ಲೋ |
ಬಲವಂತ ನಿನಗಿದಿರು ಇಲ್ಲೋ
ನಿನ್ನ ಲಲನೆಯ ತಂದು ರಾಜ್ಯವನಾಳಿದ್ಯಲ್ಲೋ ||ಬೆಳಗು||
ಗೋಕುಲದಳು ಇದ್ದೀಯಲ್ಲೋ,
ಲೋಕ ಪಾಕುಮಾಡಲು ಬುದ್ಧ ರೂಪನಾದ್ಯಲ್ಲೋ |
ಯಾಕೆ ಹಯವನೇರಿದ್ಯಲ್ಲೋ
ನಮ್ಮಸಾಕುವ ಹಯವದನ ನೀನೆ ಬಂದ್ಯಲ್ಲೋ ||ಬೆಳಗು||
Comments
Post a Comment