ಮುತ್ತು ಕೊಳ್ಳಿರೊ
ಮುತ್ತು ಕೊಳ್ಳಿರೊ ||ಪ||
ಮುತ್ತು ಬಂದಿದೆ ಕೊಳ್ಳಿ
ಸಚ್ಚಿದಾನಂದ ದಿವ್ಯವೆಂಬ ||ಅ ಪ||
ಜ್ಞಾನವೆಂಬೋ ದಾರದಲ್ಲಿ
ಪೋಣಿಸಿದ ದಿವ್ಯ ಮುತ್ತು |
ಜ್ಞಾನದಿಂದ ಕೊಂಬುದಿದನು
ದೀನರಾದ ಭಕ್ತ ಜನರು ||ಮುತ್ತು||
ಕಟ್ಟಲಾಗದು ಮೂಗಿನಲ್ಲಿ
ಇಟ್ಟು ಮೆರೆಯಲಾಗದಿದು |
ಭ್ರಷ್ಟ ಜನಕೆ ಕಾಣಿಸದಂಥ
ಕೃಷ್ಣನೆಂಬೊ ಅಣಿಮುತ್ತು ||ಮುತ್ತು||
ಹಿಡಿಯಲಿಕ್ಕೆ ನಿಲುಕದದು
ಕಡೆಯ ಕಾಣದೆಂದು ಬೆಲೆಯು |
ಪೊಡವಿಗೆಲ್ಲ ಪುರಂದರವಿಠಲ
ಒಡೆಯನೆಂಬೊ ದಿವ್ಯ ಮುತ್ತು ||ಮುತ್ತು||
Comments
Post a Comment