ಕಲ್ಯಾಣಂ ತುಳಸಿ ಕಲ್ಯಾಣಂ
ಕಲ್ಯಾಣಂ ತುಳಸಿ ಕಲ್ಯಾಣಂ
ಕಲ್ಯಾಣಂ ತುಳಸಿ ಕಲ್ಯಾಣಂ ||ಪ||
ಕಲ್ಯಾಣವೇ ನಮ್ಮ ಕೃಷ್ಣ ಶ್ರೀತುಳಸಿಗೆ
ಬಲ್ಲಿದ ಶ್ರೀ ವಾಸುದೇವನಿಗೆ ||ಅ ಪ||
ಅಂಗಳದೊಳಗೆಲ್ಲ ತುಳಸಿಯ ವನಮಾಡಿ
ಶೃಂಗಾರವ ಮಾಡಿ ಶೀಘ್ರದಿಂದ |
ಕಂಗಳ ಪಾಪವ ಪರಿಹರಿಸುವ ಮುದ್ದು
ರಂಗ ಬಂದಲ್ಲಿ ತಾ ನೆಲೆಸಿದನು ||ಕಲ್ಯಾಣಂ||
ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು
ತಂದ ಶ್ರೀಗಂಧ ಅಕ್ಷತೆಗಳಿಂದ |
ಸಿಂಧುಶಯನನ ವೃಂದಾವನದಿ ಪೂಜಿಸೆ
ಕುಂದದ ಭಾಗ್ಯವ ಕೊಡುತಿಹಳು ||ಕಲ್ಯಾಣಂ||
ಭಕ್ಷ್ಯ ಭೋಜ್ಯಮ್ಗಳ ನೈವೇದ್ಯವನಿತ್ತು
ಲಕ್ಷಬತ್ತಿಯ ದೀಪವ ಹಚ್ಚಿ |
ಅಧೋಕ್ಷಜ ಸಹಿತ ವೃಂದಾವನವ ಪೂಜಿಸೆ
ಸಾಕ್ಷಾತ್ ಮೋಕ್ಷವ ಕೊಡುತಿಹಳು ||ಕಲ್ಯಾಣಂ||
ಉತ್ಥಾನದ್ವಾದಶಿ ದಿವಸದಿಂದಲಿ ಕೃಷ್ಣ
ಉತ್ತಮ ತುಳಸಿಗೆ ವಿವಾಹವ |
ಚಿತ್ತ ನಿರ್ಮಲರಾಗಿ ಮಾಡಿದವರಿಗೆ
ಉತ್ತಮ ಗತಿ ಈವ ಪುರಂದರ ವಿಠಲ ||ಕಲ್ಯಾಣಂ||
Comments
Post a Comment