ಕಾಯೊ ಕರುಣಾಕರನೆ
ಕಾಯೊ ಕರುಣಾಕರನೆ ಕಡು ಪಾಪಿ ನಾನು
ನ್ಯಾಯವೆಂಬುದು ಎನ್ನೊಳೆಳ್ಳನಿತಿಲ್ಲ ||ಪ||
ಎಣ್ಣೆ ಕೊಪ್ಪರಿಗೆಯೊಳ್ಬಿದ್ದು ಸ್ತುತಿಸಿದವನಲ್ಲ
ಚಿನ್ನ ಪಿತನ ಬಾಧೆಗೊಳಗಾದವನಲ್ಲ |
ಬಣ್ಣಗೆಟ್ಟಡವಿಯಲಿ ತಿರುಗುವನು ನಾನಲ್ಲ
ಹೆಣ್ಣನೊಲ್ಲದೆ ನಿನ್ನ ಬಂಟನಾದವನಲ್ಲ ||ಕಾಯೊ||
ಬಲು ಬೇಡಿದುದ ನೀವ ಬಲಿಚಕ್ರವರ್ತಿಯಲ್ಲ
ನಲಿನಲಿದು ಅರ್ಪಿಸಲು ವಿದುರನಲ್ಲ |
ಕಲಿಗಳೊಳು ದ್ರೋಣ ಫಲಗುಣ ಭೀಷ್ಮ ನಾನಲ್ಲ
ಕಳವಳದಿ ಕರೆದ ಪಾಂಚಾಲಿ ನಾನಲ್ಲ ||ಕಾಯೊ||
ಉರಗರಾಜನ ತೆರದಿ ಹಾಸಿಗಾದವನಲ್ಲ
ಗರುಡನಂದದಿ ಪೊತ್ತು ತಿರುಗಿದವನಲ್ಲ |
ಸಿರಿಧರನೆ ಕಾಗಿನೆಲೆಯಾದಿಕೇಶವ ನಿನ್ನ
ಚರಣ ಡಿಂಗರಿಗ ಮಾತ್ರ ನಾನಾಗಿಹೆನೆಂದು ||ಕಾಯೊ||
Comments
Post a Comment