ಬದುಕಿದೆನು ಬದುಕಿದೆನು
ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು ||ಪ||
ಹರಿ ತೀರ್ಥ ಪ್ರಸಾದವಿಂದೆನಗೆ ದೊರಕಿತು
ಹರಿಕಥಾಮೃತವೆನ್ನ ಕಿವಿಗೊದಗಿತೋ |
ಹರಿದಾಸರು ಎನ್ನ ಬಂಧು ಬಳಗಾದರು
ಹರಿಮುದ್ರೆ ಎನಗಾಭರಣವಾಯಿತು ||ಬದುಕಿದೆನು||
ಮುಕ್ತರಾದರು ಎನ್ನ ನೂರೊಂದು ಕುಲದವರು
ಮುಕ್ತಿ ಮಾರ್ಗಕೆ ಯೋಗ್ಯ ನಾನಾದೆನು |
ಅಕಳಂಕ ಶ್ರೀಹರಿಯ ಭಕುತಿಗೆ ಮನವೆಳೆದು
ವ್ಯಕ್ತವಾಯಿತು ನಾಲಿಗೆಯೊಳು ಹರಿನಾಮ ||ಬದುಕಿದೆನು||
ಹಿಂದೆನ್ನ ಸಂತತಿಗೆ ಸಕಲ ಸಾಧನವಾಯಿತು
ಮುಂದೆನ್ನ ಜನ್ಮವು ಸಫಲವಾಯಿತು |
ತಂದೆ ಶ್ರೀ ಪುರಂದರ ವಿಠಲರಾಯ
ಬಂದು ಹೃದಯದಲಿ ನೆಲೆಯಾಗಿ ನಿಂತ ||ಬದುಕಿದೆನು||
Comments
Post a Comment