ಹರಿಚಿತ್ತ ಸತ್ಯಾ
ಹರಿಚಿತ್ತ ಸತ್ಯಾ ಹರಿಚಿತ್ತ ಸತ್ಯಾ
ನರಚಿತ್ತಕ್ಕೆ ಬಂದದ್ದು, ಲವಲೇಶ ನಡೆಯದು ||ಪ||
ಮಡದಿ ಮಕ್ಕಳ ಭಾಗ್ಯ ಬಯಸೋದು ನರಚಿತ್ತ
ಮದುವ್ಯಾಗದಿರುವುದು ಹರಿಚಿತ್ತವೂ |
ಕುದುರೆ ಅಂದಣ ಆನೆ ಬಯಸೋದು ನರಚಿತ್ತ
ಪದಚಾರಿಯಾಗೋದು ಹರಿಚಿತ್ತವಯ್ಯ ||ಹರಿಚಿತ್ತ||
ವಿಧವಿಧ ಯಾತ್ರೆಯ ಬಯಸೋದು ನರಚಿತ್ತ
ಒದಗಿ ಬರುವ ರೋಗ ಹರಿಚಿತ್ತವೂ |
ಸದಾ ಅನ್ನದಾನವ ಬಯಸೋದು ನರಚಿತ್ತ
ಉದರಕ್ಕೆ ಅಳುವುದು ಹರಿಚಿತ್ತವಯ್ಯ ||ಹರಿಚಿತ್ತ||
ಧರಣಿಯನು ಆಳಬೇಕೆಂಬುದು ನರಚಿತ್ತ
ಪರರ ಸೇವಿಸುವುದು ಹರಿಚಿತ್ತವೂ |
ಪುರಂದರ ವಿಠಲನ ಬಯಸೋದು ನರಚಿತ್ತ
ದುರಿತವ ಕಳೆವುದೆ ಹರಿಚಿತ್ತವಯ್ಯ ||ಹರಿಚಿತ್ತ||
Comments
Post a Comment