ಒಂದೇ ನಾಮವು ಸಾಲದೆ
ಒಂದೇ ನಾಮವು ಸಾಲದೆ, ಶ್ರೀ ಹರಿಯೆಂಬ
ಒಂದೇ ನಾಮವು ಸಾಲದೆ ||ಪ||
ಒಂದೇ ನಾಮವು ಭವಬಂಧನ ಬಿಡಿಸುವುದೆಂದು
ವೇದಂಗಳ ಆನಂದದಿ ಸ್ತುತಿಸುವ ||ಅ.ಪ||
ಉಭಯರಾಯರು ಸೇರಿ ಮುದದಿ ಲೆತ್ತವನಾಡಿ
ಸಭೆಯೊಳು ಧರ್ಮಜ ಸತಿಯ ಸೋಲೆ |
ನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನ್ನಲು
ಇಭರಾಜ ಗಮನೆಗಕ್ಷಯ ವಸ್ತ್ರವನಿತ್ತ ||ಒಂದೇ||
ಹಿಂದೊಬ್ಬ ಋಶಿ ಪುತ್ರನಂದು ದಾಸಿಯ ಕೂಡೆ
ಸಂದೇಹವಿಲ್ಲದೆ ಹಲವು ಕಾಲ |
ದಂದುಗದೊಳು ಸಿಲುಕಿ ನಿಂದಂತ್ಯ ಕಾಲದಿ
ಕಂದ ನಾರಗನೆಂದು ಕರೆಯಲಭಯವಿತ್ತ ||ಒಂದೇ||
ಕಾಶಿಯ ಪುರದೊಳಗೆ ಈಶ ಭಕುತಿಯಿಂದ
ಸಾಸಿರ ನಾಮದ ರಾಮನೆಂಬ |
ಶ್ರೀಶನ ನಾಮದ ಉಪದೇಶ ಸತಿಗಿತ್ತ
ವಾಸುದೇವ ಶ್ರೀ ಪುರಂದರ ವಿಠಲನ್ನ ||ಒಂದೇ||
Comments
Post a Comment