ಮರೆಯದಿರು ಮರೆಯದಿರು
ಮರೆಯದಿರು ಮರೆಯದಿರು ಮರುಳು ಮನುಜಾ…|
ನಾರಾಯಣನ ಸ್ಮರಣೆಯನು ಮಾಡು ಮನುಜಾ… ||ಪ||
ರಂಗನಾಥನು ಇರಲು ಜಂಗುಳಿ ದೈವಗಳೇಕೆ
ತುಂಗಭದ್ರೆ ಇರಲಿಕ್ಕೆ ಬಾವಿ ಕೆರೆ ಏಕೆ |
ಅಂಗನೆ ಸತಿ ಇರಲು ಬಣಗು ಹೆಣ್ಣುಗಳೇಕೆ |
ಮಂಗಳಾತ್ಮನಿರಲಿಕ್ಕೆ ಅನ್ಯ ದೈವವೇಕೆ ||ಮರೆಯದಿರು||
ಹಾಲು ಹಳ್ಳವಿರಲಿಕ್ಕೆ ವಾಳಿಯವ ತರಲೇಕೆ
ಮೇಲು ನಾಮವಿರಲಿಕ್ಕೆ ಕಟಕು ಇನ್ನೇಕೆ |
ಬಾಲ ಹನುಮನಿರಲಿಕ್ಕೆ ಹುಲ್ಲು ಕಪಿಗಳು ಏಕೆ |
ಮೇಲಾದ ತುಳಸಿ ಇರೆ ಕಗ್ಗೊರಲೆ ಏಕೆ ||ಮರೆಯದಿರು||
ಚಿನ್ನದ ಗಿರಿ ಇರಲು ಕಬ್ಬಿಣದ ಮೊರಡಿ ಏಕೆ
ರನ್ನ ಮಾಣಿಕವಿರಲು ಗಾಜಿನ ಹರಳೇಕೆ |
ಅನ್ನ ತುಪ್ಪವಿರಲಿಕ್ಕೆ ಮದ್ಯ ಪಾನಗಳೇಕೆ |
ಚೆನ್ನಾದಿ ಕೇಶವನಿರೆ ಮಿನುಗು ದೈವಗಳೇಕೆ ||ಮರೆಯದಿರು||
Comments
Post a Comment