ಚಂದ್ರಚೂಡ ಶಿವಶಂಕರ

 

ಚಂದ್ರಚೂಡ ಶಿವಶಂಕರ 

ಪಾರ್ವತಿ ರಮಣ ನಿನಗೆ ನಮೋ ನಮೋ || ಪ ||


ಸುಂದರ ಮೃಗಧರ ಪಿನಾಕಿ ಧನುಕರ 

ಗಂಗಾಶಿರ ಗಜಚರ್ಮಾಂಬರಧರ || ಅ ಪ ||


ನಂದಿವಾಹನಾನಂದದಿಂದ ಮೂಜಗದಿ ಮೆರವೆ ನೀನೇ

ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವ ನೀನೇ |

ಕಂದರ್ಪನ ಕ್ರೋಧದಿಂದಲಿ ಕೊಂದ ಉಗ್ರನು ನೀನೇ |

ಇಂದಿರೇಶ ಶ್ರೀ ರಾಮನ ನಾಮವ ಚಂದದಿ ಪೊಗಳುವ ನೀನೇ || ಚಂದ್ರಚೂಡ ||


ಬಾಲಮೃಕಂಡನ ಕಾಲನು ಎಳೆವಾಗ ಪಾಲಿಸಿದವ ನೀನೇ

ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೇ |

ಕಾಲಕೂಟವ ಪಾನಮಾಡಿದ ನೀಲಕಂಠನು ನೀನೇ |

ಜಾಲ ಮಾಡಿದ ಗೋಪಾಲನೆಂಬೊ ಹೆಣ್ಣಿಗೆ ಮರುಳಾದವ ನೀನೇ  || ಚಂದ್ರಚೂಡ ||


ಧರೆಗೆ ದಕ್ಷಿಣ ಕಾವೇರಿ ತೀರ ಕುಂಭಪುರವಾಸನು ನೀನೇ

ಕರದೊಳು ವೀಣೆಯ ಗಾನವ ಮಾಡೊ ಉರಗಭೂಷಣನು ನೀನೇ |

ಕೊರಳಲಿ ಭಸ್ಮ ರುದ್ರಾಕ್ಷಿ ಧರಿಸಿದ ಪರಮ ವೈಷ್ಣವನು ನೀನೆ |

ಗರುಡಗಮನ ಶ್ರೀ ಪುರಂದರವಿಠಲಗೆ ಪ್ರಾಣಪ್ರಿಯನು ನೀನೆ  || ಚಂದ್ರಚೂಡ ||

Comments

Popular Posts