ಮರೆಯಬೇಡ ಮನವೇ
ಮರೆಯಬೇಡ ಮನವೇ ನೀನು ಹರಿಯ ಚರಣವ||ಪ||
ಅರುಣ ಕಿರಣ ಚರಣ ಶರಣ ಪಾತಕ ಪಾವನ ||ಅ ಪ||
ಸತಿಯು ಸುತರು ಗತಿಯು ಎಂದು
ಮತಿಯು ಕೆಟ್ಟು ತಿರುಗ ಬೇಡ |
ಮತಿಯು ಕೆಟ್ಟು ಹೋದಮೇಲೆ
ಸತಿಯು ಸುತರು ಬರುವರೇನು || ಮರೆಯಬೇಡ ||
ಯಾಗ ಯಜ್ಞ ಮಾಡಲೇಕೆ
ಯೋಗಿ ಯತಿಯು ಆಗಲೇಕೆ |
ನಾಗಶಯನ ನಾರದ ವಂದ್ಯನ
ಕೂಗಿ ಭಜನೆ ಮಾಡು ಬೇಗ || ಮರೆಯಬೇಡ ||
ಹರಿಯ ಸ್ಮರಣೆ ಮಾತ್ರದಿಂದ
ಘೋರ ದುರಿತವೆಲ್ಲ ನಾಶ |
ವರದ ಪುರಂದರ ವಿಠಲನ್ನ
ನಿರತ ಭಜನೆ ಮಾಡು ಬೇಗ || ಮರೆಯಬೇಡ ||
Comments
Post a Comment