ದುಗ್ಗಾಣಿ

 

ದುಗ್ಗಾಣಿ ಎಂಬೋದು ದುರ್ಜನ ಸಂಗ
ದುಗ್ಗಾಣಿ ಬಲು ಕೆಟ್ಟದಣ್ಣ ||ಪ||

ಆಚಾರ ಹೇಳೋದು ದುಗ್ಗಾಣಿ
ನೀಚರ ಮಾಡೋದು ದುಗ್ಗಾಣಿ |
ನಾಚಿಕೆಯಿಲ್ಲದೆ ಮನೆ ಮನೆ ತಿರುಗಿ
ಛೀ ಛೀ ಎನಿಸೋದು ದುಗ್ಗಾಣಿಯಣ್ಣ  ||ದುಗ್ಗಾಣಿ||

ನೆಂಟತನ ಹೇಳೋದು ದುಗ್ಗಾಣಿ
ಬಹುನೆಂಟರನೊಲಿಸುವುದು ದುಗ್ಗಾಣಿ |
ಒಂಟೆ ಹಾಂಗೆ ಮೋರೆ ಮೇಲಕ್ಕೆ ಸೆಳಕೊಂಡು
ಕಂಟನೆನಿಸೋದು ದುಗ್ಗಾಣಿಯಣ್ಣ ||ದುಗ್ಗಾಣಿ||

ಮಾನವ ಹಿಡಿಸೋದು ದುಗ್ಗಾಣಿ
ಮಾನವ ಕೆಡಿಸೋದು ದುಗ್ಗಾಣಿ |
ಬಹುಮಾನ ನಿಧಿ ಶ್ರೀ ಪುರಂದರ ವಿಠ್ಠಲನ
ಕಾಣಿಸದಿರುವುದು ದುಗ್ಗಾಣಿಯಣ್ಣ ||ದುಗ್ಗಾಣಿ||

Comments

Popular Posts