ಶಿವನೇ ನಾ ನಿನ್ನ
ಶಿವನೇ ನಾ ನಿನ್ನ ಸೇವಕನಯ್ಯ |
ದುರ್ಮನ ಬಿಡಿಸಯ್ಯಾ…. ||ಪ||
ಭವಮೋಚಕ ಭಾಗವತಶಾಸ್ತ್ರವನು
ಅವನೀಶಗೆ ಪೇಳ್ದವ ನೀನಲ್ಲವೆ || ಅ.ಪ ||
ವೈಕಾರಿಕ ತೈಜಸ ತಾಮಸವೆಂಬ, ತ್ರೈತತ್ತ್ವಗಳೆಂಬ
ಸಾಕಾರಿ ಶಾರ್ವರಿಧವಧರ ಸಾಂಬ, ಸುರಪಾದ್ಯರ ಬಿಂಬ |
ವೈಕಲ್ಯಾಸ್ಪದವ ಕಳೆದೊಮ್ಮಿಗೆ
ವೈಕುಂಠಕೆ ಕರೆದೊಯ್ ಕರಿಗೊರಳಾ ||ಶಿವನೇ||
ಮೃತ್ಯುಂಜಯ ಮುಪ್ಪುರಹರ ಮಹದೇವ, ದೇವರ್ಕಳಕಾವ
ಸ್ತುತ್ಯಾದ್ರಿಜ ದಿತಿಜತತೀವನದಾವಾ, ದುರಿತಾಂಬುಧಿನಾವ|
ಕೃತ್ತಿವಾಸ ಎನ್ನತ್ಯಪರಾಧಗಳೆತ್ತಿಣಿಸದೆ ಕೃತಕೃತ್ಯನ ಮಾಡೈ ||ಶಿವನೇ||
ಸ್ಫಟಿಕಾಭ ಕಪಾಲಿ ಕಾಮಿತಫಲದಾ, ಫಲ್ಗುಣಸಖ ಶ್ರೀದ
ವಿಠಲ ವಿತ್ತಪಮಿತ್ರ ದ್ವಿರದ, ಚರ್ಮಾಂಬರನಾದ |
ಕುಟಿಲರಹಿತ ಧೂರ್ಜಟಿ ವೃಷಭಧ್ವಜ
ನಿಟಿಲನಯನ ಸಂಕಟವ ನಿವಾರಿಸೊ ||ಶಿವನೇ ||
Comments
Post a Comment