ಕರುಣಾಕರ

 

ಕರುಣಾಕರ ನೀನೆಂಬುವುದೇತಕೋ

ಭರವಸೆಯಿಲ್ಲೆನಗೆ ||ಪ||


ಪರಿಪರಿಯಲಿ ಈ ನರಜನ್ಮವನಿತ್ತು

ತಿರುಗಿ ತಿರುಗಿ ಮನಕರಗಿಸುವುದ ಕಂಡು ||ಅ ಪ||


ಕರಿ ಧ್ರುವ ಬಲಿ ಪಾಂಚಾಲಿ ಅಹಲ್ಯೆಯ

ಪೊರೆದವ ನೀನಂತೆ |

ಅರಿತು ವಿಚಾರಿಸಿ ನೋಡಲದೆಲ್ಲವು |

ಪರಿಪರಿ ಕಂತೆಗಳಂತಿವೆ ಕೃಷ್ಣಾ||ಕರುಣಾಕರ||


ಕರುಣಾಕರ ನೀನಾದರೆ ಈಗಲೆ

ಕರಪಿಡಿದೆನ್ನನು ಹರಿ ಕಾಯೋ |

ಸರಸಿಜಾಕ್ಷನೆ ಅರಸು ನೀನಾದರೆ |

ದುರಿತಗಳೆನ್ನನು ಬಾಧಿಪುದುಂಟೆ ||ಕರುಣಾಕರ||


ಮರಣಕಾಲದಲಿ ಅಜಮಿಳಗೊಲಿದೆ

ಗರುಡಧ್ವಜನೆಂಬ ಬಿರುದಿನಿಂದ |

ವರಬಿರುದುಗಳು ಉಳಿಯಬೇಕಾದರೆ |

ತ್ವರಿತದಿ ಕಾಯೋ ಪುರಂದರವಿಟ್ಠಲ ||ಕರುಣಾಕರ||

Comments

Popular Posts