ಹರಿ ನೀನೆ ಗತಿಯೆಂದು

 

ಹರಿ ನೀನೆ ಗತಿಯೆಂದು ನೆರೆ ನಂಬಿದವರನು

ಮರೆತಿರುವುದು ನ್ಯಾಯವೆ ||ಪ||


ಗರುಡಗಮನ ನೀ ಸಿರಿಲೋಲನಾಗಿರೆ

ಅರಸಿ ಎನ್ನನು ಕಾಯ್ವ ದೊರೆಗಳಿನ್ನಾರಯ್ಯ ||ಅಪ||


ಮುಟ್ಟಿ ಪೂಜಿಸಿ ನಿನ್ನ ಇಷ್ಟವ ಬೇಡುವ

ದೃಷ್ಟಿ ಎನ್ನೊಳಗಿದೆಯೇ |

ಕಷ್ಟವ ಪಡಲಾರೆ ಸೃಷ್ಟಿಯೊಳಗೆ ಎನ್ನ

ದುಷ್ಟಕರ್ಮವ ಬಿಡಿಸಿ ದಿಟ್ಟನೆಂದನಿಸೊ ||ಹರಿ||


ಭುಜಗಶಯನ ನಿನ್ನ ಭಜಕರ ಹೃದಯದಿ

ನಿಜವಾಗಿ ನೀನಿಲ್ಲವೆ |

ಅಜನ ಪಿತನೆ ಕೇಳು ತ್ರಿಜಗವೆಲ್ಲವು ನಿನ್ನ

ಸುಜನಪಾಲಕನೆಂದು ಭಜನೆ ಮಾಳ್ಪುದು ಕಂಡು ||ಹರಿ||


ಧರಣಿಯೊಳಗೆ ನೀ ಸುಜನರ ಸಲಹುವ

ಬಿರುದು ಪಡೆದವನಲ್ಲವೆ |

ಸಿರಿರಮಣನೆ ಎನ್ನ ಕರುಣದಿಂದಲಿ ಕಾಯೋ

ಪರಮಪುರುಷ ಸಿರಿ ಪುರಂದರವಿಠಲ ||ಹರಿ||



Comments

Popular Posts