ಕಾಗದ ಬಂದಿದೆ
ಕಾಗದ ಬಂದಿದೆ ನಮ್ಮ ಕಮಲನಾಭನದು
ಈ ಕಾಗದವನ್ನು ಓದಿಕೊಂಡು ಕಾಲವ ಕಳೆಯಿರೋ ||ಪ||
ಕಾಮಕ್ರೋಧ ಬಿಡಿರೆಂಬೊ ಕಾಗದ ಬಂದಿದೆ
ನೇಮನಿಷ್ಠೆಯೊಳಿರಿ ಎಂಬೊ ಕಾಗದ ಬಂದಿದೆ |
ತಾಮಸ ಜನರ ಕೂಡದಿರೆಂಬೊ ಕಾಗದ ಬಂದಿದೆ
ನಮ್ಮ ಕಾಮನೈಯನು ತಾನೇ ಬರೆದ ಕಾಗದ ಬಂದಿದೆ ||ಕಾಗದ ||
ಹೆಣ್ಣಿನಾಸೆ ಬಿಡಿರೆಂಬೊ ಕಾಗದ ಬಂದಿದೆ
ಹೊನ್ನಿನಾಸೆ ಬಿಡಿರೆಂಬೊ ಕಾಗದ ಬಂದಿದೆ |
ಮಣ್ಣಿನಾಸೆ ಬಿಡಿರೆಂಬೊ ಕಾಗದ ಬಂದಿದೆ
ಕಮಲನಾಭನು ತಾನೆ ಬರೆದ ಕಾಗದ ಬಂದಿದೆ ||ಕಾಗದ ||
ಗೆಜ್ಜೆ ಕಾಲ್ಗೆ ಕಟ್ಟಿರೆಂಬೊ ಕಾಗದ ಬಂದಿದೆ
ಹೆಜ್ಜೆ ಹೆಜ್ಜೆಗೆ ಹರಿ ಎನಿರೆಂಬೊ ಕಾಗದ ಬಂದಿದೆ |
ಲಜ್ಜೆ ಬಿಟ್ಟು ಕುಣಿಯಿರಿ ಎಂಬೊ ಕಾಗದ ಬಂದಿದೆ
ಪುರಂದರವಿಠ್ಠಲ ತಾನೇ ಬರೆದ ಕಾಗದ ಬಂದಿದೆ ||ಕಾಗದ ||
Comments
Post a Comment