ಓಡಿ ಬಾರಯ್ಯ

 

ಓಡಿ ಬಾರಯ್ಯ ವೈಕುಂಠಪತಿ ನಿನ್ನ ನೋಡುವೆ ಮನದಣಿಯ  ||ಪ||

ನೋಡಿ ಮುದ್ದಾಡಿ ಮಾತಾಡಿ ಸಂತೋಷದಿ |
ಪಾಡಿ ಪೊಗಳುವೆನು ಪರಮ ಪುರುಷ ಹರಿ ||ಅ ಪ||

ಕೆಂದಾವರೆಯನು ಪೋಲುವ ಪಾದಂಗಳು
ಧಿಮಿ ಧಿಮಿ ಧಿಮಿಕೆಂದು ಕುಣಿಯುತಲಿ |
ಅಂದುಗೆ ಕಿರುಗೆಜ್ಜೆ ಘಲಿಘಲಿ ಎನುತಿವೆ
ಅರವಿಂದ ನಯನನೆ ಗೋವಿಂದ ನೀ ಬಾರೋ ||ಓಡಿ||

ಕರಿತುರುಬಿನ ಮೇಲೆ ನಲಿನಲಿಯುತಲಿಹ
ಮರುಗ ಮಲ್ಲಿಗೆ ಜಾಜಿ ತುಳಸಿಯ ದಂಡೆ |
ಕರದಲಿ ಪಿಡಿದಿಹ ಮುತ್ತಿನ ಚೆಂಡು 
ಸರಸದಿಂದಲಿ ನಲಿದಾಡುತ ಬಾರೊ ||ಓಡಿ||

ಮಂಗಳಾತ್ಮಕ ಮೋಹನಾಕಾರ
ಸಂಗೀತಲೋಲ ಸದ್ಗುಣಶೀಲ |
ಅಂಗನೆಯರಿಗೆಲ್ಲ ಅತಿಪ್ರಿಯನಾದ
ಮಂಗಳ ಮೂರುತಿ ಪುರಂದರ ವಿಠಲ ||ಓಡಿ||

Comments

Popular Posts