ಲಂಗೋಟಿ ಬಲು ಒಳ್ಳೆದಣ್ಣ
ಲಂಗೋಟಿ ಬಲು ಒಳ್ಳೆದಣ್ಣ ಒಬ್ಬರ
ಹಂಗಿಲ್ಲದೆ ಮಡಿಗೆ ಒದುಗುವುದಣ್ಣ ||ಪ||
ಬಡವರಿಗಾಧಾರವಣ್ಣ ಈ ಲಂಗೋಟಿ
ಬೈರಾಗಿಗಳ ಭಾಗ್ಯವಣ್ಣ |
ಕಡು ಕಳ್ಳರಿಗೆ ಗಂಡ, ಮಡಿ ಧೋತ್ರಗಳ ಮಿಂಡ |
ನಡುಗುವ ಸಮಯಕ್ಕೆ ಮಡಿಗೆ ಒದಗುವಂಥ ||ಲಂಗೋಟಿ||
ಜಿತ ಮನ ಸನ್ಯಾಸಿಗಳಿಗಿದೆ ಕೌಪೀನ
ವ್ರತವುಳ್ಳ ಬ್ರಹ್ಮಚಾರಿಗೆ ಮುಖ್ಯವು |
ಅತಿಶಯವಿದೆ ಆಂಜನೇಯ ನಾರದರಿಗೆ |
ಗತಿಯಿಲ್ಲದವರಿಗೆ ಮಿತವಾಗಿ ಇರುವಂಥ ||ಲಂಗೋಟಿ||
ಮಡಿವಾಳರಿಗೆ ಶತ್ರು ಮಠದಯ್ಯಗಳ ಮಿತ್ರ
ಪೊಡವಿಯೊಳ್ ಯಾಚಕರಿಗೆ ನೆರವು |
ದೃಢಭಕ್ತ ಬಲಿಚಕ್ರವರ್ತಿಗಾಗಿ ನಮ್ಮ|
ಒಡೆಯ ಶ್ರೀ ಪುರಂದರವಿಠಲ ಧರಿಸಿದಂಥ ||ಲಂಗೋಟಿ||
Comments
Post a Comment