ಏನ ಬೇಡಲಿ ನಿನ್ನ
ಏನ ಬೇಡಲಿ ನಿನ್ನ ಬಳಿಗೆ ಬಂದು
ನೀನಿಟ್ಟ ಸೌಭಾಗ್ಯ ನಿಬಿಡವಾಗಿದೆ ಎನಗೆ ।।ಪ।।
ಜನನಿಯ ಕೊಡು ಎಂದು ಜಯವಂತ ಬೇಡುವೆನೇ
ಜನನಿ ಏನಿಟ್ಟಳ ಧೃವರಾಯಗೆ |
ಜನಕನ ಕೊಡು ಎಂದು ಜಗದೀಶ ಬೇಡುವೆನೇ
ಜನಕನೇನಿಟ್ಟನ ಪ್ರಹ್ಲಾದಗೇ ।।ಏನ।।
ಅನುಜನ ಕೊಡು ಎಂದು ಅತಿಶಯದಿ ಬೇಡುವೆನೇ
ಅನುಜನೇನಿಟ್ಟನೈ ಆ ವಾಲಿಗೆ |
ಧನವನ್ನೇ ಕೊಡು ಎಂದು ದೈನ್ಯದಲಿ ಬೇಡುವೆನೇ
ಧನವ ಗಳಿಸಿ ಸುಯೋಧನನೇನಾದನು ।।ಏನ।।
ಸತಿಯಳ ಕೊಡು ಎಂದು ಮತಿವಂತ ಬೇಡುವೆನೇ
ಸತಿಯಿಂದ ದ್ಯುನಾಮಕನೇನಾದನಯ್ಯ |
ಸುತರುಗಳ ಕೊಡು ಸತತದಲಿ ಬೇಡುವೆನೇ
ಸುತರಿಂದ ಧೃತರಾಷ್ಟ್ರ ಗತಿಯೆಷ್ಟು ಪಡೆದ ।।ಏನ।।
ಬಂಧುಗಳ ಕೊಡು ಎಂದು ಚೆಂದದಲಿ ಬೇಡುವೆನೇ
ಬಂಧುಗಳು ಸಲಹಿದರೆ ಗಜರಾಜನ |
ಅಂಡನವ ಕೊಡು ಎಂದು ಅತಿಶಯದಿ ಬೇಡುವೆನೇ
ಅಂಡನವನೇರಿದ ನಹುಷನೇನಾದನಯ್ ।।ಏನ।।
ಬೇಡುವೆನು ನಾ ನೊಂದ ಬೇಡತಕ್ಕುದ ದೇವ
ನೀಡೆನೆಂಬುವದು ನಿನ್ನ ಮನದಿಚ್ಛಯೈ |
ಮೂಡಲಾದ್ರೀಶ ಶ್ರೀ ಗೋಪಾಲವಿಠಲ
ಬೇಡದಂತೆ ಪರರ ಮಾಡೆನ್ನ ದೊರೆಯೇ ।।ಏನ।।
Comments
Post a Comment