ಗರುಡ ಗಮನ
ಗರುಡ ಗಮನ ಬಂದನೋ
ನೋಡಿರೋ ಬೇಗ, ಗರುಡ ಗಮನ ಬಂದನೋ ||ಪ||
ಗರುಡ ಗಮನ ಬಂದ ಧರಣಿಯಿಂದೊಪ್ಪುತ |
ಕರೆದು ಬಾರೆನ್ನುತ ವರಗಳ ಬೀರುತ ||ಅ.ಪ.||
ಎನ್ನ ರಕ್ಷಿಪ ದೊರೆ ಇಲ್ಲಿಗೆ ತಾ ಬಂದ
ಚಿನ್ನವ ಪೋಲುವ ವಿಹಂಗದ ರಥದಲ್ಲಿ |
ಘನ್ನ ಮಹಿಮ ಬಂದ ಅಬಿನ್ನ ಮೂರುತಿ ಬಂದ |
ಸಣ್ಣ ಕೃಷ್ಣ ಬಂದಾಬೆಣ್ಣೆ ಕಳ್ಳಬಂದ ||ಗರುಡ||
ಪಕ್ಷಿವಾಹನ ಬಂದ ಲಕ್ಷ್ಮೀಪತಿಯು ಬಂದ
ಕುಕ್ಷಿಯೊಳಗೆ ಜಗವ ಇಟ್ಟವತಾಬಂದ |
ಸೂಕ್ಷ್ಮಸೂಲದೊಳು ಇಪ್ಪನು ತಾ ಬಂದ |
ಸಾಕ್ಷಿಭೂತ ಅವ ಸತ್ಯೇಶ್ವರ ಬಂದ ||ಗರುಡ||
ತಂದೆ ಪುರಂದರವಿಠಲ ರಾಯ ಬಂದ
ಬಂದು ನಿಂದು ನಲಿದಾಡಿದನೋ |
ಸಿಂಧುಶಯನ ಬಂದ ಅಂದು ಸಾಂದೀಪನ |
ನಂದನ ತಂದಿತ್ತ ಆನಂದ ಮೂರುತಿ ಬಂದ ||ಗರುಡ||
Comments
Post a Comment