ಬೇವು ಬೆಲ್ಲದೊಳಿಡಲೇನು
ಬೇವು ಬೆಲ್ಲದೊಳಿಡಲೇನು ಫಲಾ
ಹಾವಿಗೆ ಹಾಲೆರೆದೇನು ಫಲಾ ||ಪ||
ಕುಟಿಲವ ಬಿಡದಿಹ ಕುಜನರು ಮಂತ್ರವ
ಪಠನೆಯ ಮಾಡಿದರೇನು ಫಲ|
ಸಟೆಯನ್ನಾಡುವ ಮನುಜರ ಮನದಲಿ
ವಿಠಲನ ನೆನೆದರೆ ಏನು ಫಲಾ ||ಬೇವು||
ಕಪಟತನದಿ ವಂಚಿಸುವ ಮನುಜರು
ಜಪಗಳ ಮಾಡಿದರೆ ಏನು ಫಲಾ |
ಕುಪಿತ ಬುದ್ಧಿಯನು ತ್ಯಜಿಸದೆ ನಿತ್ಯದಿ ,
ಉಪವಾಸ ಇದ್ದರೆ ಇನ್ನೇನು ಫಲಾ ||
ಮಾತಾ ಪಿತರನು ಬಳಲಿಸುವಾ ಮಗ
ಯಾತ್ರೆಯ ಮಾಡಿದರೇನು ಫಲಾ |
ಘಾತಕ ತನವನು ಬಿಡದೆ ನಿರಂತರ
ಗೀತೆಯನೋದಿದರೇನು ಫಲಾ ||ಬೇವು||
ಪತಿಯನು ನಿಂದಿಸಿ ಬೊಗಳುವ ಸತಿಯರು
ವ್ರತಗಳ ಮಾಡಿದರೇನು ಫಲ |
ಅತಿಥಿಗಳ ಎಡೆಯಲಿ ಭೇದವ ಮಾಡುತ
ಗತಿಯನು ಬಯಸಿದರೆ ಏನು ಫಲಾ ||
ಹೀನ ಕೃತ್ಯಗಳ ಮಾಡುತ ನದಿಯಲಿ
ಸ್ನಾನವ ಮಾಡಿದರೇನು ಫಲಾ |
ಶ್ರೀನಿಧಿ ಪುರಂದರ ವಿಠಲನ ನೆನೆಯದೆ
ಮೌನವ ಮಾಡಿದರೇನು ಫಲಾ ||ಬೇವು||
Comments
Post a Comment