ಹೇಗೆ ಮೆಚ್ಚಿಸಲಿ

 

 ಹೇಗೆ ಮೆಚ್ಚಿಸಲಿ ಅರ್ಚಿಸಲಿ ನಿನ್ನ
ನಾಗಶಯನನ ನಾರದ ವಂದಿತನೇ ದೇವ ||ಪ||

ಮಂಗಳಾಭಿಷೇಕಕೆ ಉದಕ ತರುವೆನೆನೆ
ಗಂಗೆಯಂಗುಷ್ಠದಿ ಪಡೆದಿರುವೆ |
ಸಂಗೀತ ಕೀರ್ತನೆ ಪಾಡುವೆನೆಂದರೆ
ತುಂಬುರು ನಾರದರು ಪಾಡುತಿಹರೋ ದೇವ ||ಹೇಗೆ||

ಪುಷ್ಪವ ತಂದು ನಿನಗರ್ಪಿಸುವೆನೆಂದರೆ
ಪುಷ್ಪ ಪಲ್ಲವಿಸಿದೆ ಹೊಕ್ಕುಳಲಿ |
ಇಪ್ಪ ತೆತ್ತಿಸಕೋಟಿ ದೇವರ್ಕಳದನೊಪ್ಪಿ 
ನೈವೇದ್ಯ ನೀಡಲು ತೃಪ್ತನಾಗುವೆ ಎಂತೋ ||ಹೇಗೆ||

ಕೋಟಿಸೂರ್ಯರ ಪ್ರಭೆ ಮಿಗಿಲಾದಾತನಿಗೊಂದು
ದೀಪವನು ಹಚ್ಚಿದರೆ ಬೆಳಕಹುದೆ |
ಸಾಟಿಗಾಣದೆ ಲಕ್ಷ್ಮಿ ಉರಸ್ಥಳವಾಗಿರೆ
ಲೋಷ್ಟ ಕಾಸು ಎಂತು ಕಾಣಿಕೆ ನೀಡೆಲೊ ||ಹೇಗೆ||

ಹಾಸಿಗೆಯನು ತಂದು ಹಾಸುವೆನೆಂದರೆ
ಶೇಷನ ಮೇಲೆ ನೀ ಪವಡಿಸಿರ್ಪೆ |
ಬೀಸಣಿಗೆಯ ತಂದು ಬೀಸುವೆನೆಂದರೆ
ಬೀಸುತಿಹನು ಖಗ ತನ್ನ ಪಕ್ಕದಲಿ ||ಹೇಗೆ||

ನಿತ್ಯ ಗುಣಾರ್ಣವ ನಿಜಗುಣ ಪರಿಪೂರ್ಣ
ಸಚ್ಚಿದಾನಂದ ಸನಕಾದಿವಂದ್ಯ |
ಮುಕ್ತಿದಾಯಕ ನಮ್ಮ ಪುರಂದರವಿಠಲ
ಭಕ್ತಿದಾಯಕನೆಂದು ಸ್ತುತಿಸಿ ಕೊಂಡಾಡುವೆನೊ ||ಹೇಗೆ||

Comments

Popular Posts