ಅಲ್ಲಿ ನೋಡಲು ರಾಮ

 

ಅಲ್ಲಿ ನೋಡಲು ರಾಮ, ಇಲ್ಲಿ ನೋಡಲು ರಾಮ
ಎಲ್ಲಿಲ್ಲಿ ನೋಡಿದರೂ ಅಲ್ಲಿ ಶ್ರೀರಾಮ                ||ಪ||

ರಾವಣನ ಮೂಲಬಲ ಕಂಡು ಕಪಿಸೇನೆ
ಆವಾಗಲೇ ಬೆದರಿ ಓಡಿದವು |
ಈವೇಳೆ ನರನಾಗಿ ಇರಬಾರದೆಂದೆಣಿಸಿ
ದೇವ ರಾಮಚಂದ್ರ ಜಗವೆಲ್ಲ ತಾನಾದ             ||ಅಲ್ಲಿ||

ಅವನಿಗೆ ಇವ ರಾಮ ಇವನಿಗೆ ಅವ ರಾಮ
ಅವನಿಯೊಳೀಪರಿ ರೂಪ ಉಂಟೆ |
ಲವ ಮಾತ್ರದಿ ಅಸುರ ದುರುಳರೆಲ್ಲರು
ಅವರವರೆ ಹೊಡೆದಾಡಿ ಹತರಾಗಿ ಹೋದರು     ||ಅಲ್ಲಿ||

ಹನುಮದಾದಿ ಸಾಧು ಜನರು ಅಪ್ಪಿಕೊಂಡು
ಕುಣಿಕುಣಿದಾಡಿದರು ಅತಿ ಹರುಷದಲಿ |
ಕ್ಷಣದಲ್ಲಿ ಪುರಂದರವಿಠಲರಾಯನು
ಕೊನೆಗೊಡೆಯನು ತಾನೊಬ್ಬನಾಗಿ ನಿಂತ         ||ಅಲ್ಲಿ||

Comments

Popular Posts