ತೊರೆದು ಜೀವಿಸಬಹುದೆ

 

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ

ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ || ಪ ||


ತಾಯಿ ತಂದೆಯ ಬಿಟ್ಟು ತಪವು ಮಾಡಲುಬಹುದು

ದಾಯಾದಿ ಬಂಧುಗಳ ಬಿಡಲುಬಹುದು |

ರಾಯ ತಾ ಮುನಿದರೆ ರಾಜ್ಯವಾ ಬಿಡಬಹುದು

ಕಾಯಜಾಪಿತ ನಿನ್ನ ಅಡಿಯ ಬಿಡಲಾಗದು || ತೊರೆದು ||


ಒಡಲು ಹಸಿದರೆ ಅನ್ನವನು ಬಿಡಬಹುದು

ಪಡೆದ ಕ್ಷೇತ್ರವಬಿಟ್ಟು ಹೊರಡಲು ಬಹುದು |

ಮಡದಿ ಮಕ್ಕಳ ಕಡೆಗೆ ತೊಲಗಿಸಿ ಬಿಡಬಹುದು

ಕಡಲೊಡೆಯ ನಿನ್ನಡಿಯ ಘಳಿಗೆ ಬಿಡಲಾಗದು || ತೊರೆದು ||


ಪ್ರಾಣವ ಪರರಿಗೆ ಬೇಡಿದರೆ ಕೊಡಬಹುದು

ಮಾನಾಭಿಮಾನವ ತಗ್ಗಿಸಲು ಬಹುದು |

ಪ್ರಾಣದಾಯಕನಾದ ಆದಿ ಕೇಶವರಾಯ

ಜಾಣ ಶ್ರೀಕೃಷ್ಣ ನಿನ್ನ ಅಡಿಯ ಬಿಡಲಾಗದು || ತೊರೆದು ||

Comments

Popular Posts