ಕೈಯ ತೋರೋ

 

ಕೈಯ ತೋರೋ ಕರುಣಿಗಳರಸಾ ಕೈಯ ತೋರೊ ಕೃಷ್ಣ |
ಕೈಯಲಿ ತುಂಬ ಬೆಣ್ಣೆಯ ಕೊಡುವೆ ಕೈಯ ತೋರೋ ||ಪ||

ಅಂಗುಲಿಯೊಳು ಪೊನ್ನುಂಗುರವಿಟ್ಟ ಕೈಯ ತೋರೊ 
ಅಂಗೈಯಲಿ ಧ್ವಜಪಧ್ಮವಿರಾಜಿಪ ಕೈಯ ತೋರೊ |
ಶೃಂಗಾರದಿ ಶಂಖಚಕ್ರವ ಧರಿಸಿದ ಕೈಯ ತೋರೊ 
ಅಂಗನೆಯರ ಕುಚ ಉತ್ತುಂಗದಲಿಟ್ಟ ಕೈಯ ತೋರೊ ||ಕೈಯ||

ಬಡಬ್ರಾಹ್ಮಣನವಲಕ್ಕಿಯ ಬೇಡಿದ ಕೈಯ ತೋರೊ 
ಕೊಡೆ ಮಾಡಿ ಗಿರಿಯೆತ್ತಿ ಗೋಗಳ ಕಾಯ್ದ ಕೈಯ ತೋರೊ|
ಕಡುಹಿರಣ್ಯಾಖ್ಯನ ಒಡಲನು ಬಗೆದ ಕೈಯ ತೋರೊ 
ಧೃಡ ಪ್ರಹ್ಲಾದನ ಮಂಡೆಯೊಳಿಟ್ಟ ಕೈಯ ತೋರೊ ||ಕೈಯ||

ಅಲ್ಲಿ ಪೂತನಿಯ ಅಸುವನೆ ಹೀರಿದ ಕೈಯ ತೋರೊ 
ಬಲ್ಲಿದಮಲ್ಲರ ಮರ್ದಿಸಿ ಬಂದ ಕೈಯ ತೋರೊ|
ಮೆಲ್ಲನೆ ಕುಬುಜೆಯ ಡೊಂಕನೆ ತಿದ್ದಿದ ಕೈಯ ತೋರೊ 
ಬಿಲ್ಲನು ಎಡಗೈಯಲಿ ಮುರಿದಿಟ್ಟ ಕೈಯ ತೋರೊ  ||ಕೈಯ||

ಒಲಿದು ಪಾರ್ಥಗೆ ರಥವನು ನಡೆಸಿದ ಕೈಯ ತೋರೊ 
ಬಲಿಯನು ವಂಚಿಸಿ ದಾನವ ಬೇಡಿದ ಕೈಯ ತೋರೊ |
ಫಲಪುಷ್ಪ ಪಾರಿಜಾತವ ತಂದ ಕೈಯ ತೋರೊ
ಮಲ್ಲಿಗೆ ಜಾಜಿಯ ತುರುಬಿಗೆ ಮುಡಿಸಿದ ಕೈಯ ತೋರೊ ||ಕೈಯ||

ಆಕಾಶದ ಚಂದ್ರಮನನು ಕರೆದ ಕೈಯ ತೋರೊ 
ನಾಕಪತಿಗೆ ಅಭಯವನಿತ್ತ ಕೈಯ ತೋರೊ |
ಅನೇಕ ಬಗೆಯಲಿ ಕೊಳಲನೂದುವ ಕೈಯ ತೋರೊ 
ಶ್ರೀಕಾಂತ ನಮ್ಮ ಪುರಂದರವಿಠಲ ಕೈಯ ತೋರೊ ||5|| 

Comments

Popular Posts