ಕುರುಡು ನಾಯಿ

 

ಕುರುಡು ನಾಯಿ ಸಂತೆಗೆ ಬಂತಂತೆ 
ಅದು ಯಾಕೆ ಬಂತೋ ||ಪ||

ಖಂಡ ಸಕ್ಕರೆ ಹಿತವಿಲ್ಲವಂತೆ
ಕಂಡ ಎಲುಬು ಕಡಿದಿತಂತೆ |
ಹೆಂಡಿರ ಮಕ್ಕಳ ನೆಚ್ಚಿತಂತೆ 
ಕೊಂಡು ಹೋಗುವಾಗ ಯಾರಿಲ್ಲವಂತೆ ||ಕುರುಡು||

ಭರದಿ ಅಂಗಡಿ ಹೊಕ್ಕಿತಂತೆ
ತಿರುವಿ ದೊಣ್ಣೆಲಿ ಇಕ್ಕಿದರಂತೆ |
ಮರೆತರಿನ್ನು ವ್ಯರ್ಥವಂತೆ 
ನರಕದೊಳಗೆ ಬಿದ್ದಿತಂತೆ ||ಕುರುಡು||

ವೇದಶಾಸ್ತ್ರವನೋದಿತಂತೆ
ಗಾದೆಯ ಮಾಡಿ ಬಿಟ್ಟಿತಂತೆ |
ಹಾದಿ ತಪ್ಪಿ ನಡೆದು ಯಮನ 
ಬಾಧೆಗೆ ತಾ ಗುರಿಯಾಯಿತಂತೆ ||ಕುರುಡು||

ನಾನಾ ಜನ್ಮವನೆತ್ತಿತಂತೆ
ಮಾನವನಾಗಿ ಹುಟ್ಟಿತಂತೆ |
ಕಾನನ ಕಾನನ ತಿರುಗಿತಂತೆ 
ತಾನು ತನ್ನನೆ ಮರೆಯಿತಂತೆ ||ಕುರುಡು||

ಮಂಗನ ಕೈಯ ಮಾಣಿಕ್ಯದಂತೆ
ಹಾಂಗೂ ಹೀಂಗೂ ಕಳೆದೀತಂತೆ |
ರಂಗ ಪುರಂದರವಿಠಲನ ಮರೆತು 
ಭಂಗ ಬಹಳ ಪಟ್ಟಿತಂತೆ ||ಕುರುಡು|| 

Comments

Popular Posts