ನೋಡಿರೈ ಶಾರದೆಯು

 

ನೋಡಿರೈ ಶಾರದೆಯು ಕುಳಿತಿರುವ ಚಂದ |
ಬೇಡಿದುದ ಕೊಡುವ ಸಂತೋಷ ಮುಖದಿಂದ ||ಪ||

ತೋರುತಿವೆ ನಾಲ್ಕು ಕೈಗಳು ಬೇರೆ ಬೇರೆ 
ಬೀರುತಿದೆಯಾನಂದ ಬಿಗಿದುಟ್ಟ ಸೀರೆ ||ನೋಡಿರೈ||

ಎಡಗಾಲ ಮೇಲೆ ಬಲಗಾಲ ನೆಗೆದಿಟ್ಟು |
ಕಡಗ ಕಂಕಣ ಕುಪ್ಪಸಾದಿಗಳ ತೊಟ್ಟು ||ನೋಡಿರೈ||

ಓಲೆ ಪುಸ್ತಕವಿರುವುದೊಂದು ಕೈಯೊಳಗೆ 
ಜೋಲುತಿದೆ ಜಪಮಾಲೆ ಇನ್ನೊಂದರೊಳಗೆ ||ನೋಡಿರೈ||

ಎಳೆಯುತಿದೆ ಮನವ ಕೈಗಳ ವೀಣೆಯಾಟ 
ಹೊಳೆಯುತಿದೆ ತಲೆಯ ಮೇಲೇರಿದ ಕಿರೀಟ ||ನೋಡಿರೈ||

ಹಳುವಿನೊಳು ಶಿಲೆಯಗಲ್ಲಿನ ಮೇಲೆ ನೆಲೆಸಿ 
ಕುಳಿತಿಹಳು ತಾನೊಲಿವ ಠಾಣೆಯಿದು ಎನಿಸು ||ನೋಡಿರೈ||

ಯಾವಾಗ ತನ್ನನೇರಲು ಬರುವಳೆಂದು 
ಸೇವಿಸಲು ನೋಡುತಿದೆ ನವಿಲಲ್ಲಿ ನಿಂದು ||ನೋಡಿರೈ||

ಮರಗಳರಮನೆಯಂತೆ ಮೆರೆಯುತಿದೆ ಹಿಂದೆ 
ಹರುಷಗೊಳಿಸುವ ಸರೋವರ ಎದುರಿನಿಂದೆ ||ನೋಡಿರೈ||

ಅಮ್ಮಯ್ಯ ಬಾರೆ ತುದಿನಾಲಗೆಯ ಮೇಲೆ 
ದಮ್ಮಯ್ಯ ಬೇಡುವೆನು ದಯವಿಡು ಸುಶೀಲೆ ||ನೋಡಿರೈ||

ವೆಂಕಟೇಶನ ದಯವು ಇರುವಂತೆ ನಮ್ಮ 
ಪಂಕಜಾಸನ ರಾಣಿ ಸಲಹು ನಮ್ಮಮ್ಮ||ನೋಡಿರೈ||

Comments

Popular Posts