ಹುಚ್ಚು ಹಿಡಿಯಿತು
ಹುಚ್ಚು ಹಿಡಿಯಿತು ಎನಗೆ ಹುಚ್ಚು ಹಿಡಿಯಿತು|
ಅಚ್ಯುತನ ಧ್ಯಾನವೆಂಬ ಮೆಚ್ಚು ಮದ್ದು ತಲೆಗೆ ಏರಿ ||ಪ||
ವಾಸುದೇವನೆಂಬ ನಾಮ ವದನದಲ್ಲಿ ವದರುವೆ
ಮಾಯ ಪಾಶವೆಂಬ ಅಂಗಿಯನ್ನು ಹರಿದು ಹರಿದು ಹಾಕುವೆ |
ಕೇಶವನ ಹೂವ ಮುಡಿದು ಕುಣಿದು ಕುಣಿದು ಹಾಡುವೆ
ಕೆಟ್ಟ ದೋಷವೆಂಬ ಗೋಡೆಯನ್ನು ಕೆದರಿ ಕೆದರಿ ಹಾರುವಂಥ ||ಹುಚ್ಚು ಹಿಡಿಯಿತು||
ಕ್ರಷ್ಣನಅಂಘ್ರಿ ಕಮಲದಲ್ಲಿ ಸೊರಗಿ ಸೊರಗಿ ಬೀಳುವೆ
ಭವಕಷ್ಟವೆಂಬ ಕುಂಭವನ್ನು ಒಡೆದು ಒಡೆದು ಹಾಕುವೆ |
ನಿಷ್ಠರನ್ನು ಕಂಡು ಅವರ ಹಿಂದೆ ಹಿಂದೆ ಹೋಗುವೆ
ಕಡು ದುಷ್ಟರನ್ನು ಕಂಡು ನಾನು ಕಲ್ಲು ಕಲ್ಲು ಬೀರುವಂಥ ||ಹುಚ್ಚು ಹಿಡಿಯಿತು||
ಮಂದಮತಿಗಳನ್ನು ಕಂಡು ಮೂಕನಾಗಿ ಇರುವೆ
ಹರಿಯ ನಿಂದೆ ಮಾಡಿದವನ ಮೇಲೆ ಮಣ್ಣು ಮಣ್ಣು ಚೆಲ್ಲುವೆ |
ಬಂಧುಬಳಗದವರೊಳು ಉದಾಸೀನನಾಗಿ ಬಾಳುವೆ
ಎನ್ನ ತಂದೆ ಪುರಂದರವಿಠ್ಠಲನ ನೆನೆದು ಕುಣಿದು ಪಾಡುವಂತ ||ಹುಚ್ಚು ಹಿಡಿಯಿತು||
Comments
Post a Comment