ಕೇಶವನೊಲುಮೆಯು
ಕೇಶವನೊಲುಮೆಯು ಆಗುವ ತನಕ
ಹರಿ ದಾಸರೊಳಿರುತಿರು ಹೇ ಮನುಜ ||ಪ||
ಕ್ಲೇಶಪಾಶಂಗಳ ಹರಿದು ವಿಲಾಸದಿ
ಶ್ರೀಶನ ನುತಿಗಳ ಪೋಗಳುತ ಮನದೊಳು ||ಅ.ಪ.||
ಮೋಸದಿ ಜೀವರ ಘಾಸಿ ಮಾಡಿದ ಪಾಪ ಕಾಶಿಗೆ ಹೋದರೆ ಹೋದೀತೇ
ಶ್ರೀಶನ ಭಕುತರ ದೂಷಿಸಿದ ಫಲ ಕಾಸು ಕೊಟ್ಟರೆ ಬಿಟ್ಟೀತೆ |
ಭಾಷೆಯ ಕೊಟ್ಟು ನಿರಾಶೆಯ ಮಾಡಿದ ಫಲ ಕ್ಲೇಶವ ಗೊಳಿಸದೆ ಇಟ್ಟೀತೆ
ಭೂಸುರ ಸ್ವವ ಕ್ರಾಸ ಮಾಡಿದ ಫಲ ಏಸೇಸು ಜನುಮಕು ಬಿಟ್ಟೀತೆ ||ಕೇಶವ||
ಜೀನನ ವಶದೊಳು ನಾನಾ ದ್ರವ್ಯವಿರೆ ದಾನ ಧರ್ಮಕೆ ಮನಸಾದೀತೇ
ಹೀನ ಮನುಜನಿಗೆ ಜ್ಞಾನವ ಭೋಧಿಸೆ ಹೀನ ವಿಷಯವಳಿದೋದೀತೇ |
ಮಾನಿನಿ ಮನಸು ನಿಧಾನವಿರದಿರೆ ಮಾನಾಭಿ ಮಾನಗಳು ಉಳಿದೀತೇ
ಭಾನುಪ್ರಕಾಶನ ಭಜನೆಯ ಮಾಡದ ಹೀನಗೆ ಮುಕುತಿಯು ದೊರಕೀತೆ ||ಕೇಶವ||
ಕರುಣಾಮ್ರುತದಾಭರಣವ ಧರಿಸಿದ ಪರಮಗೆ ಸಿರಿಯು ತಪ್ಪೀತೆ
ಕರುಣಾ ಪಾಶದ ಉರವಣೆ ತೊರೆದಾತಗೆ ಶರಣರ ಕರುಣವು ತಪ್ಪೀತೆ |
ಅರಿತು ಶಾಸ್ತ್ರವನು ಆಚರಿಪ ಯೋಗ್ಯಗೆ ಗುರು ಉಪದೇಶವು ತಪ್ಪೀತೆ
ವರವೇಲಾಪುರ ದಾದಿಕೇಶವನ ಸ್ಮರಿಸುವವನಿಗೆ ಮೋಕ್ಷ ತಪ್ಪೀತೆ ||ಕೇಶವ||
Comments
Post a Comment