ತಲ್ಲಣಿಸದಿರು ಕಂಡ್ಯ
ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ||ಪ||
ಬೆಟ್ಟದಾ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ |
ಪುಟ್ಟಿಸಿದ ದೇವ ತಾ ಹೊಣೆಗಾರನಾಗಿರಲು
ಗಟ್ಯಾಗೆ ರಕ್ಷಿಪನು ಇದಕೆ ಸಂಶಯವಿಲ್ಲ ||ತಲ್ಲಣಿಸದಿರು||
ಅಡವಿಯೊಳಗಾಡುವ ಮೃಗ ಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರವಿನತ್ತವರು ಯಾರೋ |
ಹಡೆದ ಜನನಿಯ ತೆರದೆ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ ||ತಲ್ಲಣಿಸದಿರು||
ಕಲ್ಲಿನಲಿ ಹುಟ್ಟಿದ ಕೂಗುವಾ ಕಪ್ಪೆಗೆ
ಅಲ್ಲಿ ಆಹಾರವನು ತಂದೀಯುವರು ಯಾರೋ |
ಬಲ್ಲಿದನು ಕಾಗಿನೆಲೆ ಆದಿಕೇಶವರಾಯ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ||ತಲ್ಲಣಿಸದಿರು||
Comments
Post a Comment