ರಾಮ ಮಂತ್ರವ ಜಪಿಸೋ

 

ರಾಮ ಮಂತ್ರವ ಜಪಿಸೋ ಹೇ ಮನುಜ || ಪ ||

ಆ ಮಂತ್ರ ಈ ಮಂತ್ರ ಜಪಿಸಿ ನೀ ಕೆಡಬೇಡ
ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ || ಅ.ಪ ||

ಕುಲಹೀನನಾದರು ಕೂಗಿ ಜಪಿಸುವ ಮಂತ್ರ
ಸಲೆ ಬೀದಿ ಬೀದಿಯೊಳು ನುಡಿವ ಮಂತ್ರ |
ಹಲವು ಪಾಪಂಗಳ ಹತಗೊಳಿಸುವ ಮಂತ್ರ
ಸುಲಭದಿಂದಲಿ ಸ್ವರ್ಗ ಸೂರೆಗೊಂಬುವ ಮಂತ್ರ ||ರಾಮ ||

ಸ್ನಾನ ಮೌನಂಗಳಿಗೆ ಸಾಧನದ ಮಂತ್ರ
ಜ್ಞಾನಿಗಳು ಮನದಿ ಧ್ಯಾನಿಪ ಮಂತ್ರ |
ಹೀನ ಗುಣಂಗಳ ಹಿಂಗಿಸುವ ಮಂತ್ರ
ಏನೆಂಬೆ ವಿಭೀಷಣಗೆ ಪಟ್ಟಗಟ್ಟಿದ ಮಂತ್ರ || ರಾಮ ||

ಸಕಲ ವೇದಂಗಳಿಗೆ ಸಾರವೆನಿಪ ಮಂತ್ರ
ಮುಕುತಿ ಮಾರ್ಗಕೆ ಇದೆ ಮೂಲ ಮಂತ್ರ |
ಭಕುತಿ ರಸಕೆ ಬಟ್ಟೆ ಒಮ್ಮೆ ತೋರುವ ಮಂತ್ರ
ಸುಖ ನಿಧಿ ಪುರಂದರ ವಿಠಲನ ಮಂತ್ರ || ರಾಮ ||

Comments

Popular Posts