ಏಳು ನಾರಾಯಣನೆ
ಏಳು ನಾರಾಯಣನೆ ಏಳು ಲಕ್ಷ್ಮೀರಮಣ
ಏಳು ಶ್ರೀಗಿರಿ ಒಡೆಯ ವೆಂಕಟೇಶ ।।ಪ॥
ಕಾಸಿದ್ದ ಹಾಲನ್ನು ಕಾವಡಿಯೊಳು ಹೆಪ್ಪಿಟ್ಟು
ಲೇಸಾಗಿ ಕಡೆದು ಹೊಸಬೆಣ್ಣೆ ಕೊಡುವೆ |
ಶೇಷಶಯನನೆ ಏಳು ಸಮುದ್ರ ಮಥನವ ಮಾಡು |
ದೇಶ ಕೆಂಪಾಯಿತು ಏಳಯ್ಯ ಹರಿಯೇ ।।ಏಳು।।
ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ
ಸುರರು ತಂದಿದ್ದಾರೆ ಬಲು ಭಕುತಿಯಿಂದ |
ಅರವಿಂದನಾಭ ಸಿರಿ ವಿಧಿಭವಾದಿಗಳೊಡೆಯ |
ಹಿರಿದಾಗಿ ಕೋಳಿ ಕೂಗಿತೇಳಯ್ಯ ಹರಿಯೇ ।।ಏಳು।।
ದಾಸರೆಲ್ಲರು ಬಂದು ಧೂಳಿ ದರ್ಶನ ಗೊಂಡು
ಲೇಸಾಗಿ ತಾಳ ದಂಡಿಗೆಯ ಪಿಡಿದು |
ಶ್ರೀಶನೆಲೆಯಾದಿ ಕೇಶವ ನಿಮ್ಮ ಪಾದವನು |
ಲೇಸಾಗಿ ಸ್ಮರಿಸಿ ಪೊಗಳುವರು ಶ್ರೀಹರಿಯೇ ।।ಏಳು।।
Comments
Post a Comment