ರಂಗನಾಯಕ ರಾಜೀವ ಲೋಚನ
ರಂಗನಾಯಕ ರಾಜೀವ ಲೋಚನ
ರಮಣನೇ ಬೆಳಗಾಯಿತು ಏಳೆನ್ನುತಾ ।|ಪ।|
ಅಂಗನೇ ಲಕುಮಿ ತಾ ಪತಿಯನೆಬ್ಬಿಸಿದಳು
ಶೃಂಗಾರದ ನಿದ್ರೆ ಸಾಕೆನ್ನುತಾ ||ಅ ಪ||
ಪಕ್ಷಿರಾಜನು ಬಂದು ಬಾಗಿಲಲ್ಲಿ ನಿಂದು
ಅಕ್ಷಿ ತೆರೆದು ಬೇಗ ಈಕ್ಷೀಸೆಂದು |
ಪಕ್ಷಿ ಜಾತಿಗಳೆಲ್ಲಾ ಚಿಲಿಪಿಲಿಗುಟ್ಟುತಾ
ಸೂಕ್ಷ್ಮದಲ್ಲಿ ನಿನ್ನ ಸ್ಮರಿಸುವವೋ ಕೃಷ್ಣ ।।ರಂಗನಾಯಕ।।
ಸನಕ ಸನಂದನ ಸನತ್ಸುಜಾತರು ಬಂದು
ವಿನಯದಿಂ ಕರ ಮುಗಿದು ಓಲೈಪರು |
ಘನಶುಕ ಶೌನಕ ವ್ಯಾಸ ವಾಲ್ಮೀಕರು
ನೆನೆದು ನೆನೆದು ಕೊಂಡಾಡುವರು ಹರಿಯೇ ।।ರಂಗನಾಯಕ।।
ಸುರರು ಕಿನ್ನರರು ಕಿಂಪುರುಷರು ಉರಗುರು
ಪರಿಪರಿಯಲಿ ನಿನ್ನ ಸ್ಮರಿಸುವರು |
ಅರುಣನು ಬಂದು ಉದಯಾಚಲದಲಿ ನಿಂದು
ಕಿರಣ ತೋರುವನು ಭಾಸ್ಕರನು ಶ್ರೀಹರಿಯೇ ।।ರಂಗನಾಯಕ।।
ಪದುಮನಾಭನೇ ನಿನ್ನ ನಾಮಾಮೃತವನ್ನು
ಪದುಮಾಕ್ಷಿಯರು ತಮ್ಮ ಗೃಹದೊಳಗೆ |
ಉದಯದೊಳೆದ್ದು ಸವಿದಾಡುತ್ತಾ ಪಾಡುತ್ತಾ
ದಧಿಯ ಕಡೆವರೇಳೋ ಮಧುಸೂಧನ ಕೃಷ್ಣಾ ।।ರಂಗನಾಯಕ।।
ಮುರಮಥನನೇ ನಿನ್ನ ಚರಣದ ಸೇವೆಯ
ಕರುಣಿಸಬೇಕೆಂದು ತರುಣಿಯರು|
ಪರಿಪರಿಯಿಂದಲೇ ಸ್ಮರಿಸಿ ಹಾರೈಪರು
ಪುರಂದರ ವಿಠಲ ನೀನೇಳೋ ಶ್ರೀ ಹರಿಯೇ ।।ರಂಗನಾಯಕ।।
Comments
Post a Comment