ಆರಂಭದಲಿ ನಮಿಪೆ
ಆರಂಭದಲಿ ನಮಿಪೆ ಬಾಗಿ ಶಿರವ |
ಹೇರಂಬ ನೀನೊಲಿದು ನೀಡೆಮಗೆ ವರವ ||ಪ||
ದ್ವಿರದವದನನೆ ನಿರುತ ದ್ವಿರದ ವಂದ್ಯನ ಮಹಿಮೆ
ಹರುಷದಲಿ ಜಿಹ್ವೆ ಕರ ಎರಡರಿಂದ |
ಬರೆದು ಪಾಡುವುದಕ್ಕೆ ಬರುವ ವಿಘ್ನವ ತರಿದು
ಕರುಣದಿಂದಲಿ ಎನ್ನ ಕರ ಪಿಡಿದು ಸಲಹೆಂದು ||ಆರಂಭದಲಿ||
ಕುಂಭಿಣಿಜೆ ಪತಿರಾಮ ಜಂಬಾರಿ ಧರ್ಮಜರು
ಅಂಬರಾಧಿಪ ರಕುತಾಂಬರನೆ ನಿನ್ನ ||
ಸಂಭ್ರಮದಿ ಪೂಜಿಸಿದರೆಂಬ ವಾರುತೆ ಕೇಳಿ
ಹಂಬಲವ ಸಲಿಸೆಂದು ನಂಬಿ ನಿನ್ನಡಿಗಳಿಗೆ ||ಆರಂಭದಲಿ||
ಸೋಮಶಾಪದ ವಿಜಿತ ಕಾಮ ಕಾಮಿತದಾತ
ವಾಮದೇವನ ತನಯ ನೇಮದಿಂದ ||
ಶ್ರೀ ಮನೋಹರನಾದ ಶ್ಯಾಮಸುಂದರ ಸ್ವಾಮಿ
ನಾಮ ನೆನೆಯುವ ಭಾಗ್ಯ ಪ್ರೇಮದಲಿ ಕೊಡು ಎಂದು ||ಆರಂಭದಲಿ||
Comments
Post a Comment