ಇಷ್ಟು ದಿನ ಈ ವೈಕುಂಠ
ಇಷ್ಟು ದಿನ ಈ ವೈಕುಂಠ
ಎಷ್ಟು ದೂರವೋ ಎನುತಲಿದ್ದೆ |
ದೃಷ್ಟಿಯಿಂದಲಿ ನಾನು ಕಂಡೆ
ಸೃಷ್ಟಿಗೀಶನೇ ಶ್ರೀರಂಗಶಾಯಿ ||ಪ||
ಎಂಟು ಏಳನು ಕಳೆದುದರಿಂದೆ
ಬಂಟರೈವರ ತುಳಿದುದರಿಂದೆ |
ತುಂಟಕನೊಬ್ಬನ ತರಿದುದರಿಂದೆ
ಬಂಟನಾಗಿ ಬಂದನೋ ಶ್ರೀರಂಗಶಾಯಿ ||ಇಷ್ಟು||
ವಜ್ರ ವೈಢೂರ್ಯದ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾದ್ವಾರವ ಕಂಡೆ |
ನಿರ್ಜರಾದಿ ಮುನಿಗಳ ನಾ ಕಂಡೆ
ದುರ್ಜನಾಂತಕನೆ ಶ್ರೀರಂಗಶಾಯಿ ||ಇಷ್ಟು||
ರಂಭೆ ಊರ್ವಶಿ ಮೇಳವ ಕಂಡೆ
ತುಂಬುರು ಮುನಿ ನಾರದರನು ಕಂಡೆ |
ಅಂಬುಜೋದ್ಭವ ರುದ್ರರ ಕಂಡೆ
ಶಂಬರಾರಿಪಿತನೆ ಶ್ರೀರಂಗಶಾಯಿ ||ಇಷ್ಟು||
ನಾಗಶಯನನ ಮೂರುತಿ ಕಂಡೆ
ಭೋಗಿಭೂಷಣ ಶಿವನನು ಕಂಡೆ |
ಭಾಗವತರ ಸಮ್ಮೇಳವ ಕಂಡೆ
ಕಾಗಿನೆಲೆಯಾದಿ ಕೇಶವನ ನಾ ಕಂಡೆ ||ಇಷ್ಟು||
Comments
Post a Comment