ಆನೆ ಬಂದಿತಮ್ಮ
ಆನೆ ಬಂದಿತಮ್ಮ
ಮರಿಯಾನೆ ಬಂದಿತಮ್ಮ ||ಪ||
ತೊಲಗಿರೆ ತೊಲಗಿರೆ ಪರಬ್ರಹ್ಮ
ಬಲು ಸರಪಣಿ ಕಡಕೊಂಡು ಬಂತಮ್ಮ ||ಅ ಪ||
ಕಪಟನಾಟಕದ ಮರಿಯಾನೆ
ನಿಕಟಸಭೆಯಲಿ ನಿಂತಾನೆ |
ಶಕತನ ಬಂಡಿಯ ಮುರಿದಾನೆ |
ಕಪಟನಾಟಕದಿಂದ ಸೋದರ ಮಾವನ
ಅಕಟಕಟೆನ್ನದೆ ಕೊಂದಾನೆ ||ಆನೆ||
ಕೀಳು ಭುವನವನು ಉಂಡಾನೆ
ಸ್ವಾಮಿ ಬಾಲಕನೆಂಬ ಚೆಲ್ವಾನೆ |
ಬಲ್ಲ ಗೋವುಗಳ ಕೂಡೆ ನಲಿದಾನೆ |
ಚೆಲುವ ಕಾಳಿಂಗನ ಹೆಡೆಯಲಾಡುತ್ತ |
ಸೊಬಗ ಹೆಚ್ಚಿದ ಪಟ್ಟದಾನೆ
ಮದ ಸೊಕ್ಕಿ ಬರುತಾನೆ ||ಆನೆ||
ಭೀಮಾರ್ಜುನರನ್ನು ಗೆಲಿಸ್ಯಾನೆ
ಪರಮ ಭಾಗವತರ ಪ್ರಿಯಾನೆ |
ಮುದದಿಂದ ಮಥುರೆಲಿ ನಿಂತಾನೆ |
ಮದಮುಖದಸುರರ ದಿಗಿಲಿಟ್ಟು ಕೊಂದು
ಪುರಂದರ ವಿಠಲನೆಂಬಾನೆ ||ಆನೆ||
Comments
Post a Comment