ಮುಳ್ಳು ಕೊನೆಯ ಮೇಲೆ
ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ
ಎರಡು ತುಂಬದು ಒಂದು ತುಂಬಲೇ ಇಲ್ಲ||ಪ||
ತುಂಬಲಿಲ್ಲದ ಕೆರೆಗೆ ಬಂದರು ಮೂವರು ಒಡ್ಡರು
ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ||ಅ ಪ||
ಕಾಲಿಲ್ಲದ ಒಡ್ಡಗೆ ಕೊಟ್ಟರು ಮೂರು ಎಮ್ಮೆಗಳ
ಎರಡು ಬರಡು ಒಂದಕ್ಕೆ ಕರುವೇ ಇಲ್ಲ|
ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ
ಎರಡು ಸವಕಲು ,ಒಂದು ಸಲ್ಲಲೇ ಇಲ್ಲ||ಮುಳ್ಳು||
ಸಲ್ಲದಿದ್ದ ಹೊನ್ನಿಗೆ ಬಂದರು ಮೂವರು ನೋಟಗಾರರು ,
ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ|
ಕಣ್ಣಿಲ್ಲದ ನೋಟಗಾರಗೆ ಕೊಟ್ಟರು ಮೂರು ಊರುಗಳ
ಎರಡು ಹಾಳು ,ಒಂದಕ್ಕೆ ಒಕ್ಕಲೇ ಇಲ್ಲ||ಮುಳ್ಳು||
ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು
ಇಬ್ಬರು ಚೊಂಚರು ,ಒಬ್ಬಗೆ ಕೈಯೇ ಇಲ್ಲ|
ಕೈಯಿಲ್ಲದ ಕುಂಬಾರನು ಮಾಡಿದನು ಮೂರು ಮಡಕೆಗಳ
ಎರಡು ಒಡಕು ಒಂದಕ್ಕೆ ಬುಡವೇ ಇಲ್ಲ||ಮುಳ್ಳು||
ಬುಡವಿಲ್ಲದ ಮಡಕೆಗೆ ಹಾಕಿದರು ಮೂರು ಅಕ್ಕಿಕಾಳ
ಎರಡು ಬೇಯದು ,ಒಂದು ಬೇಯಲೇ ಇಲ್ಲ|
ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು
ಇಬ್ಬರು ಉಣ್ಣರು ,ಒಬ್ಬಗೆ ಹಸಿವೇ ಇಲ್ಲ||ಮುಳ್ಳು||
ಹಸಿವಿಲ್ಲದ ನೆಂಟಗೆ ಕೊಟ್ಟರು ಮೂರು ಟೊಣೆಪೆಗಳ
ಎರಡು ತಾಕದು ,ಒಂದು ತಾಕಲೇ ಇಲ್ಲ|
ತಾಕಲಿಲ್ಲದ ಟೊಣೆಪೆಯ ತಾಕಿಸಿ ಸದ್ಗತಿಯನು
ಈಯಬೇಕು ಪುರಂದರ ವಿಠ್ಠಲರಾಯ ||ಮುಳ್ಳು||
Comments
Post a Comment