ಮಾನವ ಜನ್ಮ ದೊಡ್ಡದು

 

ಮಾನವ ಜನ್ಮ ದೊಡ್ಡದು 

ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ   ||ಪ||


ಕಣ್ಣು ಕೈ ಕಾಲ್ಕಿವಿ ನಾಲಗೆ ಇರಲಿಕ್ಕೆ

ಮಣ್ಣುಮುಕ್ಕಿ ಮರಳಾಗುವರೆ |

ಹೊನ್ನು ಹೆಣ್ಣಿಗಾಗಿ ಹರಿನಾಮಾಮೃತ

ಉಣ್ಣದೆ ಉಪವಾಸ ಮಾಡುವರೇ   ||ಮಾನವ||


ಕಾಲನ ದೂತರು ಕಾಲ್ಪಿಡಿದೆಳೆವಾಗ

ತಾಳು ತಾಳೆಂದರೆ ಕೇಳುವರೇ?

ಧಾಳಿ ಬಾರದ ಮುನ್ನ ಧರ್ಮವ ಗಳಿಸಿರೊ

ಹಾಳು ಸಂಸಾರ ಸುಳಿಗೆ ಸಿಲುಕುವರೇ?   ||ಮಾನವ||


ಏನು ಕಾರಣ ನೀವು ಯದುಪತಿಯ ಮರೆತಿರಿ

ಧನ ಧಾನ್ಯ ಸತಿ ಸುತರು ಕಾಯುವರೇ ?

ಇನ್ನಾದರು ನೀವು ಏಕಭಾವದಿಂದ 

ಶ್ರೀ ಹರಿ ಪುರಂದರವಿಠಲನ ಭಜಿಸಿರೊ   ||ಮಾನವ||

Comments

Popular Posts